ಜಿಲ್ಲೆ

ಹಳೇ ಮೈಸೂರಿಗೆ ನಾಲ್ವಡಿ ಕರ್ನಾಟಕ ಎಂದು ಹೆಸರಿಡಿ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮುಂಬೈ ಕರ್ನಾಟಕಕ್ಕೆ ‘ಕಿತ್ತೂರು ಕರ್ನಾಟಕ’, ಹೈದರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ವೆಂದು ಹೆಸರಿಟ್ಟಂತೆ ಹಳೇ ಮೈಸೂರು ಪ್ರಾಂತ್ಯಕ್ಕೆ ‘ನಾಲ್ವಡಿ ಕರ್ನಾಟಕ’ ಎಂದು ಹೆಸರಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಲಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಒತ್ತಾಯಿಸಿದರು.

ನಗರದ ಗಾಂಧಿಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬ, ನಾಲ್ಕನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕವು ಸಾಹಿತ್ಯ, ಕೃಷಿ, ಧಾರ್ಮಿಕ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ ಎಂದು ಬಣ್ಣಿಸಿದರು.

ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಜನರನ್ನು ಆಳುವವರು ಹೇಗೆ ರಾಜ್ಯ ಅಥವಾ ದೇಶವನ್ನು ಅಭಿವೃದ್ಧಿ ಮಾಡಬೇಕೆಂದು ವಿಶ್ವಕ್ಕೆ ತೋರಿಸಿಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್. ಕೆಲವೊಂದು ಪ್ರಶಸ್ತಿಗಳು ಯಾರಿಗೆ ಸಿಗುತ್ತದೆ ಎಂಬ ಮೇಲೆ ಅವುಗಳ ಗೌರವ ಹೆಚ್ಚಾಗುತ್ತದೆ. ಅದರಂತೆ ಮಹನೀಯರಿಂದ ಪ್ರಶಸ್ತಿ ಪಡೆದಾಗ ಪುರಸ್ಕೃತರ ಮೌಲ್ಯವು ಸಹ ಹೆಚ್ಚಾಗುತ್ತದೆ. ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಜಿಲ್ಲೆಯಾದ ಮಂಡ್ಯದಲ್ಲಿ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿರುವುದು ನಿಜಕ್ಕೂ ಹೆಮ್ಮೆಯ ಕಾರ್ಯ ಎಂದರು.

ಮನ್ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ಡಾ.ಜೀಶಂಪ ಸಾಹಿತ್ಯ ವೇದಿಕೆ ಹೆಸರಲ್ಲಿ ವರ್ಷದಲ್ಲಿ ಮೂರ್ನಾಲ್ಕು ಕಾರ್ಯಕ್ರಮಗಳನ್ನು ನಡೆಸಿ ಸಾಹಿತಿಗಳನ್ನು ಗುರುತಿಸುತ್ತಿರುವುದು ಶ್ಲಾಘನೀಯ. ಇಂತಹ ಸಂಘಟನೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿ ಸಹಕಾರ ಕೊಟ್ಟಾಗ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲು ಸಾಧ್ಯವಿದೆ ಎಂದು ಹೇಳಿದರು.

ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ರಾಜ್ಯದಲ್ಲಿ ನೂರಕ್ಕೆ ಶೇ.90ರಷ್ಟು ಕನ್ನಡ ಮಾತನಾಡುವುದು ಮಂಡ್ಯ ಜಿಲ್ಲೆ. ಕನ್ನಡಕ್ಕೆ ಎಂದೂ ಕೊರತೆಯಾಗದಂತೆ ಭಾಷೆಯ ಸಾರ್ವಭೌಮತ್ವವನ್ನು ರಾಜ್ಯದಲ್ಲಿ ಎತ್ತಿ ಹಿಡಿಯುತ್ತಿದೆ. ಆದರೆ ಗಡಿ ಪ್ರದೇಶದ ಗ್ರಾಮಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಇಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಸಾಹಿತಿ ಡಾ.ಪದ್ಮಾ ಶ್ರೀನಿವಾಸ್ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು. ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ಕೆ.ಎಂ.ಅಪೇಕ್ಷ ಇತರರಿದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.