ಜಿಲ್ಲೆ

ಆಟವಾಡಲು ತೆಂಗಿನ ಚಿಪ್ಪಿನಲ್ಲಿ ನೀರು ಮೊಗೆಯಲು ಹೋದ ಪುಟಾಣಿಯನ್ನು ಹೊತ್ತೊಯ್ದ ವಿಧಿ!

reportermys

ಚನ್ನರಾಯಪಟ್ಟಣ: ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ತೆಂಗಿನ ಚಿಪ್ಪು ಹಿಡಿದು ಆಟವಾಡುತಿದ್ದ ಹೆಣ್ಣು ಮಗುವೊಂದು ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದೆ. 

ತಾಲೂಕಿನ ಬಿಳಿಕೆರೆ ಗ್ರಾಮದ ನಿವಾಸಿ ಧರಣೇಶ್ ಹಾಗೂ ಕುಮಾರಿ ದಂಪತಿಗಳ ಪುತ್ರಿ ಶ್ರೇಯ(4) ಮೃತ ಮಗು.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಮನೆಯ ಮುಂಭಾಗದ ಅಂಗಳದಲ್ಲಿ ತೆಂಗಿನ ಚಿಪ್ಪು ಹಾಗೂ ಪರ್ಸ್  ಹಿಡಿದು ಆಟವಾಡುತಿದ್ದ ಶ್ರೇಯಳನ್ನು ಗಮನಿಸಿಕೊಂಡೆ ಮನೆಯವರೆಲ್ಲ ಕೆಲಸದಲ್ಲಿ ತೊಡಗಿದ್ದರು.  ಆದರೆ 12 ಗಂಟೆ ಸುಮಾರಿನಲ್ಲಿ ಮಗು ಕಾಣಿಸದಿದ್ದಾಗ ಮನೆಯವರೆಲ್ಲ ಗಾಬರಿಗೊಂಡು  ಹುಡುಕಿದರೂ ಆಕೆ ಕಾಣಿಸಲಿಲ್ಲ.

ನಂತರ ಮನೆಯ ಹಿತ್ತಲಿನ ಸ್ನಾನದ ಮನೆಯಲ್ಲಿ ಹುಡುಕಿದಾಗ ಅಲ್ಲಿ ನೀರು ಸಂಗ್ರಹಕ್ಕೆಂದು ನಿರ್ಮಿಸಿರುವ ತೊಟ್ಟಿಯಲ್ಲಿ ಮಗುವಿನ ಮೃತ ದೇಹ ತೇಲುತ್ತಿತ್ತು.  ಆಟವಾಡುವ ಸಲುವಾಗಿ ಚಿಪ್ಪಿನಲ್ಲಿ ನೀರು ತರಲು ಹೋದಾಗ ನೀರಿಗೆ ಬಿದ್ದ ಪರ್ಸ್ ತೆಗೆದುಕೊಳ್ಳುವ ಯತ್ನದಲ್ಲಿ ಮಗು ಮುಗ್ಗರಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎನ್ನಲಾಗಿದೆ. 

ಮುಗಿಲು ಮುಟ್ಟಿದ ಆಕ್ರಂದನ: ಕುಟುಂಬದ ಕಣ್ಣಾಗಿ ಇದ್ದ ಒಬ್ಬಳೇ ಹೆಣ್ಣು ಮಗು ಶ್ರೇಯ ಮೃತಪಟ್ಟ ವಿಷಯ ತಿಳಿಯುತಿದ್ದಂತೆಯೇ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಸಂಜೆ ಅಂತ್ಯ ಸಂಸ್ಕಾರ ನೆರವೇರಿತು.