ಕೆ.ಎಂ.ದೊಡ್ಡಿ: ಪ್ಲೈವುಡ್ ಫ್ಯಾಕ್ಟರಿಯಲ್ಲಿ 2023ರ ಡಿ.20ರಂದು ಸುಮಾರು 40 ಲಕ್ಷ ರೂ ಮೌಲ್ಯದ ಯಂತ್ರಗಳ ಕಳವು ಮಾಡಿದ್ದ ಆರೋಪಿಗಳನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿರುವ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನ ಸಚಿನ್, ಈತನ ತಂದೆ ಚಕ್ರಪಾಣಿ, ಬೆಂಗಳೂರು ಪೀಣ್ಯದ ನಾಗರಾಜ ಆಲಿಯಾಸ್ ರಾಜ ಹಾಗೂ ಚನ್ನಪಟ್ಟಣ ಸಮೀಪದ ಬೇಗೂರಿನ ಸಿದ್ದರಾಜು ಬಂಧಿತ ಆರೋಪಿಗಳು.
ಇವರು ಅಣ್ಣೂರು ಸಮೀಪವಿರುವ ಎಂ.ನೌಷಾದ್ ಎಂಬುವರಿಗೆ ಸೇರಿದ್ದ ಮ್ಯಾಗ್ನಸ್ ರೇಡಿಯಂ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಕಳವು ಮಾಡಿ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಬೆಂಗಳೂರು, ಹಾಸನ ಹಾಗೂ ಆಲೂರಿನಲ್ಲಿ ಯಂತ್ರಗಳನ್ನು ಪತ್ತೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ 2 ಕ್ಯಾಂಟರ್, ಒಂದು ಕಾರು ಹಾಗೂ ಗ್ಯಾಸ್ ಕಟ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಎಸ್ಪಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿಎಸ್‌ಐಗಳಾದ ರಾಮಸ್ವಾಮಿ, ಭೀಮಪ್ಪ ಬಾಣಸಿ ಮತ್ತು ಸಿಬ್ಬಂದಿ ಮಹೇಶ್, ರಾಜೇಂದ್ರ, ನಟರಾಜ ವಿಠಲ್, ಸುಬ್ರಮಣಿ, ಅರುಣ್, ವಾಸುದೇವ, ರವಿಕಿರಣ್, ಲೋಕೇಶ್ ಅವರನ್ನೊಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅಭಿನಂದಿಸಿದ್ದಾರೆ.