ಜಿಲ್ಲೆ

ನಾಟಕ ಅಕಾಡೆಮಿ ಪ್ರಶಸ್ತಿಗೆ ನಾಲ್ವರು ಆಯ್ಕೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಇತ್ತೀಚಿಗೆ ನಡೆದ ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ ಕಲಾವಿದರನ್ನು ಹಾಗೂ ನಾಟಕರಾರರನ್ನು ಸರ್ವಾನುಮತದಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಆಯ್ಕೆ ಮಾಡಲಾಗಿದ್ದು ಗ್ರಾಮಾಂತರ ಜಿಲ್ಲೆಯ ನಾಲ್ವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಭಾಗದಲ್ಲಿ ನಡೆಯುತ್ತಿದ್ದ ಡ್ರಾಮಾ, ನಾಟಕಗಳನ್ನ ನೋಡುತ್ತಿದ್ದಾಗ ನಾನು ಅಭಿನಯಿಸುವ ಆಸಕ್ತಿ ಬೆಳೆಯಿತು. ಬಾಲ್ಯದಿಂದಲೇ ನಾಟಕ, ಡ್ರಾಮಾಗಳಲ್ಲಿ ಭಾಗಿಯಾಗುತ್ತಿದ್ದೆ. 9ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ನಾಟಕದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಅಂದಿನಿಂದ 45 ವರ್ಷಗಳಿಂದಲೂ ಕಲಾಸೇವೆಯಲ್ಲಿ ಇದ್ದೇನೆ. ಬೇಸಿಗೆಯಲ್ಲಿ ಕೇವಲ 15 ದಿನ ಮಾತ್ರ ನಾನು ಮನೆಯಲ್ಲಿರುತ್ತೇನೆ. ರಾಜ್ಯದ ಯಾವುದೇ ಮೂಲೆಯಲ್ಲಿ ನಾಟಕಕ್ಕೆ ಕರೆದರೂ ಹೋಗಿ ಅಭಿನಯಿಸುತ್ತೇನೆ. ನನ್ನ ಬೆಳವಣಿಗೆಯಲ್ಲಿ ನನ್ನ ಕುಟುಂಬದ ಪಾತ್ರ ಅಪಾರವಾಗಿದೆ. ಪತ್ನಿ, ಮಕ್ಕಳು ಬೆಂಬಲದಿಂದಲೇ ಸಾಧನೆ ಮಾಡಲು ಸಾಧ್ಯವಾಯಿತು. ರಾಜ್ಯದಲ್ಲಿ ಎಲ್ಲೆ ಹೋದರು ಜನ ಗುರುತಿಸುತ್ತಾರೆ. ಯಾವುದೇ ವೇದಿಕೆಯಾದರೂ ಸರಿಯೇ ಪ್ರಾರ್ಥನೆ ನನಗೆ ಕೊಡುತ್ತಾರೆ. ನಾಟಕದಲ್ಲಿ ಮಾದಗೊಂಡನಹಳ್ಳಿಯ ಎಂ.ಆರ್.ರುದ್ರಪ್ಪ ಮೊದಲ ಬಾರಿಗೆ ನನಗೆ ಅವಕಾಶ ನೀಡಿ ಪ್ರೋತ್ಸಾಹಿಸಿದರು. ಬಳಿಕ ಅಂದಿನ ಕಾಲಕ್ಕೆ ಪ್ರಖ್ಯಾತ ನಾಟಕಕಾರರಾಗಿದ್ದ ಸುರದೇನಪುರ ಪುಟ್ಟನಂಜಪ್ಪ, ಬಿ.ವಜ್ರಪ್ಪ, ಕಲ್ಲೂರು ಶ್ರೀನಿವಾಸ್, ಕಲ್ಲಕೆರೆ ನರಸಿಂಹಮೂರ್ತಿ, ಸೀತಕಲ್ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಸಾಕಷು ಅಭಿನಯಿಸಿದ್ದೇನೆ. ಮುಖ್ಯವಾಗಿ ಆಂಜನೇಯ, ದಶರಥ ಪಾತ್ರಗಳು ಮತ್ತು ಕರ್ಣ, ಕೃಷ್ಣನ ಪಾತ್ರಗಳು ಸಾಕಷ್ಟು ಜನಮನ್ನಣೆ ನೀಡಿವೆ. ನನ್ನ ಪಾತ್ರಗಳನ್ನು ನೋಡಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಮತ್ತು ಮಾಜಿ ಸಿಎಂ ವೀರಪ್ಪಮೊಯ್ಲಿ ಅನೇಕ ಬಾರಿ ಆಶೀರ್ವದಿಸಿದ್ದಾರೆ. ನನ್ನ ಕಲಾಸೇವೆಯನ್ನ ಗುರುತಿಸಿ ಪ್ರಶಸ್ತಿ ನೀಡಿದ ಕರ್ನಾಟಕ ನಾಟಕ ಅಕಾಡೆಮಿಗೆ ಧನ್ಯವಾದಗಳು ಸಲ್ಲಿಸುತ್ತೇನೆ.

ಡಾ. ಕೆ.ಎಂ ಕೃಷ್ಣಮೂರ್ತಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ದೊಡ್ಡಬಳ್ಳಾಪುರ


ಗ್ರಾಮೀಣ ರಂಗಭೂಮಿ ಬೆಳೆಯಬೇಕು

ನಗರ ಪಟ್ಟಣಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತ ಕೆಲಸವಾಗಬೇಕು. ಗ್ರಾಮೀಣ ಭಾಗದ ರಂಗಭೂಮಿ ಬೆಳೆದರೆ ಇಡೀ ದೇಶದ ರಂಗಭೂಮಿಯೇ ಬೆಳೆದಂತೆ ಎಂಬುದು ನನ್ನ ಅಭಿಪ್ರಾಯ ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಆದ್ಯತೆ ನೀಡಬೇಕಾಗಿದೆ. ಬಾಲ್ಯದಿಂದಲೂ ನಟನಾಗಬೇಕೆಂಬ ಬಯಕೆಯಂತೂ ಇತ್ತು. ಆದರೆ ಎಂಎ ಓದುವಾಗ 1999ರಲ್ಲಿ ಇದಕ್ಕೊಂದು ಸುವರ್ಣ ಅವಕಾಶ ಸಿಕ್ಕಿತ್ತು. ಅಂದಿನಿಂದ ಸುಮಾರು 25 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಟನೆಯೊಂದಿಗೆ ನಿರ್ದೇಶಕನಾಗಿಯೂ ಕ್ಷೇತ್ರದಲ್ಲಿ ಸೇವೆ ಮಾಡಿದ್ದೇನೆ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡೇ ಬರುತ್ತಿದ್ದೇನೆ. ನನ್ನ ಈ ಪಯಣದಲ್ಲಿ ಸಾಕಷ್ಟು ಮಂದಿ ಪ್ರೋತ್ಸಾಹಕರಾಗಿ, ಮಾರ್ಗದರ್ಶಕರಾಗಿ ನನ್ನ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅದರಲ್ಲಿ ತಕ್ಷಣ ನೆನಪಿಗೆ ಬರುವು ಡಾ.ನಾಗೇಶ್, ಡಾ.ರಾಮಕೃಷ್ಣಯ್ಯ, ವಿ.ರಾಮಮೂರ್ತಿ ಅವರು, ಇವರಲ್ಲದೆ ಸಾಕಷ್ಟು ಮಂದಿ ಇದ್ದಾರೆ ಹೇಳುತ್ತಾ ಹೋದರೆ ದೊಡ್ಡಪಟ್ಟಿಯಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂಬುದು ನನ್ನ ಮನವಿ.

ದೇವರಾಜ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ,ದೇವನಹಳ್ಳಿ