ಗಾಯಾಳು ಮಂಜಣ್ಣ ಮತ್ತು ಹನುಮಂತರಾಯಪ್ಪ 
ಜಿಲ್ಲೆ

ಹೊಡೆದಾಟಕ್ಕೆ ತಿರುಗಿತು ಜಮೀನು ಕುರಿತ ಜಗಳ: ಹಾಲಿನ ಡೇರಿ ಅಧ್ಯಕ್ಷರಿಂದಲೇ ಹಲ್ಲೆ

ನೆಲಮಂಗಲ: ಜಮೀನು ವಿಚಾರವಾಗಿ ನಡೆದ ಜಗಳ ಹೊಡೆದಾಟದವರೆಗೆ ಹೋಗಿದ್ದು, ದಾಯಾದಿಗಳು ನಾಲ್ವರ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಚಿಕ್ಕಪುಟ್ಟಯ್ಯನಪಾಳ್ಯದಲ್ಲಿ ಈ ಜಗಳ ನಡೆದಿದೆ.

ಈ ಗ್ರಾಮದ ಮಂಜಣ್ಣ (65), ನಾಗೇಶ್ (23), ಕೃಷ್ಣಪ್ಪ (55), ಹನುಮಂತರಾಯಪ್ಪ (33) ಎಂಬವರು ಹಲ್ಲೆಗೊಳಗಾಗಿದ್ದು, ಗಾಯಗೊಂಡಿದ್ದಾರೆ. ಆರೋಪಿಗಳು ದೊಣ್ಣೆ ಹಾಗೂ ಚಾಕು ಹಿಡಿದು ಇವರ ಮೇಲೆ ದಾಳಿ ಮಾಡಿದ್ದಾರೆ. ಚಿಕ್ಕಪುಟ್ಟಯ್ಯನಪಾಳ್ಯ ಹಾಲಿನ ಡೇರಿ ಅಧ್ಯಕ್ಷ ಗೋವಿಂದರಾಜು, ಸಂಪತ್ ಕುಮಾರ್, ಶಾಂತಮ್ಮ ಮತ್ತು ಕೆಂಪರಾಜು, ಪುಟ್ಟಮ್ಮ ಎಂಬವರು ಆರೋಪಿಳು.

ಚಿಕ್ಕಪುಟ್ಟಯ್ಯನಪಾಳ್ಯ ಗ್ರಾಮದ ಸರ್ವೆ ನಂ.107ರ 8 ಎಕರೆ 30 ಗುಂಟೆ ಜಮೀನಿನನ್ನು ತಮ್ಮ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಲ್ಲದೆ ಪ್ರಾಣ ಬೆದರಿಕೆಯನ್ನೂ ಹಾಕಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.