ಜಿಲ್ಲೆ

ಪತಿ ಕೊಲೆಗೆ ಯತ್ನಿಸಿದ್ದ ಪತ್ನಿ ಸೇರಿ ನಾಲ್ವರ ಸೆರೆ

ಶಿವಮೊಗ್ಗ: ಪ್ರಿಯಕರನ ಜತೆ ಸೇರಿಕೊಂಡು ಪತಿಯ ಕೊಲೆಗೆ ಯತ್ನಿಸಿದ್ದ ಪತ್ನಿ ಸೇರಿ ನಾಲ್ವರನ್ನು ಆನವಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನವಟ್ಟಿ ದಾನಮ್ಮ ಬಡಾವಣೆಯ ಮಮತಾ, ಸೊರಬ ತಾಲೂಕಿನ ತಲ್ಲೂರು ಗ್ರಾಮದ ಎಚ್.ಎಂ.ಮುತ್ತೇಶ್, ಆತನ ಸಹಚರರಾದ ಸುನೀಲ್ ಮತ್ತು ನವೀನ್ ಬಂಧಿತರು. ಇವರು ದಾನಮ್ಮ ಬಡಾವಣೆಯ ಪ್ರದೀಪ್ ಎಂಬುವರ ಕೊಲೆಗೆ ಸಂಚು ರೂಪಿಸಿದ್ದರು.

13 ವರ್ಷದ ಹಿಂದೆ ಪ್ರದೀಪ್ ಮತ್ತು ಮಮತಾ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಪುತ್ರಿ ಇದ್ದಾಳೆ. ಈ ನಡುವೆ ಮಮತಾಗೆ ತಲ್ಲೂರು ಗ್ರಾಮದ ಎಚ್.ಎಂ.ಮುತ್ತೇಶನ ಪರಿಚಯವಾಗಿತ್ತು. ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಮುತ್ತೇಶ ಹಣಕಾಸಿನ ಸಹಾಯದ ನೆಪದಲ್ಲಿ ಮಮತಾಳ ಜತೆ ಸಲುಗೆ ಬೆಳೆಸಿಕೊಂಡಿದ್ದ. ಸಲುಗೆ ಇಬ್ಬರ ನಡುವೆ ಅಕ್ರಮ ಸಂಬಂಧದ ಅನುಮಾನಕ್ಕೂ ದಾರಿ ಮಾಡಿಕೊಟ್ಟಿತ್ತು. ಇದು ಪ್ರದೀಪ್ ಮತ್ತು ಮಮತಾ ನಡುವೆ ಆಗಾಗ್ಗೆ ಜಗಳಕ್ಕೂ ಕಾರಣವಾಗಿತ್ತು.

ಒಂದು ದಿನ ಪ್ರದೀಪ್ ತನ್ನ ಪತ್ನಿ ಮಮತಾಳ ಮೊಬೈಲ್ ನೋಡುತ್ತಿದ್ದಾಗ ಮುತ್ತೇಶನೊಂದಿಗೆ ಸಂಭಾಷಣೆ ನಡೆಸಿದ್ದ ಆಡಿಯೋಗಳು ಸಿಕ್ಕಿದ್ದವು. ಅವುಗಳನ್ನು ಮೇಲೆ ಕ್ಲಿಕ್ ಮಾಡಿದಾಗ ಪ್ರದೀಪ್ ಮೇಲೆ ಕಾರು ಅಪಘಾತಪಡಿಸಿ ಕೊಲೆ ಮಾಡುವ ಬಗ್ಗೆ ಮಮತಾ ಮತ್ತು ಮುತ್ತೇಶ್ ಸಂಭಾಷಣೆ ನಡೆಸಿದ್ದರು. ಅಲ್ಲಿ ವಿಫಲವಾದರೆ ಪತಿಗೆ ನಿದ್ರೆ ಮಾತ್ರೆ ಕೊಡುವಂತೆ ಮುತ್ತೇಶ್, ಮಮತಾಗೆ ಸೂಚಿಸಿದ್ದ.

ಅದರಂತೆ ಆ.29ರಂದು ಸೊರಬ ತಾಲೂಕಿನ ಕೋಟಿಪುರಕ್ಕೆ ಪಿಗ್ಮಿ ಸಂಗ್ರಹಕ್ಕೆ ತೆರಳುತ್ತಿದ್ದಾಗ ಪ್ರದೀಪ್‌ನ ಕೊಲೆ ಯತ್ನ ನಡೆದಿತ್ತು. ಈ ಬಗ್ಗೆ ಪ್ರದೀಪ್ ಪತ್ನಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಕೊಂಡ ಪೊಲೀಸರು ಪ್ರದೀಪ್ ಪತ್ನಿ ಮಮತಾ, ಎಚ್.ಎಂ.ಮುತ್ತೇಶ್, ಸುನೀಲ್ ಮತ್ತು ನವೀನ್ ಎಂಬುವರನ್ನು ಬಂಧಿಸಿದ್ದಾರೆ.