ಜಿಲ್ಲೆ

ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿಗೆ ವಿಆರ್‌ಎಲ್ ಸಂಸ್ಥೆಯ ನಾಲ್ವರು ಭಾಜನ

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ವಿಆರ್‌ಎಲ್ ಸಂಸ್ಥೆಯ(ವಿಜಯವಾಣಿ ಮತ್ತು ದಿಗ್ವಿಜಯ) ನಾಲ್ವರು ಭಾಜನರಾಗಿದ್ದಾರೆ.


ವಿಜಯವಾಣಿಯ ಜಿಲ್ಲಾ ವರದಿಗಾರರಾಗಿದ್ದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಾಗೂ ವರದಿಗಾರರಾದ ಆದರ್ಶ್ ಅದ್ಕಲೇಗಾರ್, ದಿನೇಶ್ ಮಾಲಂಬಿ, ದಿಗ್ವಿಜಯ ನ್ಯೂಸ್ ಚಾನಲ್‌ನ ಜಿಲ್ಲಾ ವರದಿಗಾರ ಅನುಕಾರ್ಯಪ್ಪ, ಹಾಗೂ ಛಾಯಗ್ರಾಹಕ ಕೆ.ಬಿ.ದಿವಾಕರ್(ಜಾಕಿ) ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲಾಭ ತರುವ ರಾಂಬೂಟಾನ್ ವರದಿಗೆ ಆದರ್ಶ್ ಅದ್ಕಲೇಗಾರ್ ಪಡೆದುಕೊಂಡಿದ್ದಾರೆ.


ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸೂರಿಲ್ಲದೆ ಸೊರಗಿದೆ ಹಾವು ಗೊಲ್ಲರ ಬದುಕು ವರದಿಗೆ ದಿನೇಶ್ ಮಾಲಂಬಿ ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಚಾನಲ್‌ನಲ್ಲಿ ಪ್ರಸಾರವಾಗಿರುವ ತುದಿಬಳ್ಳಿಯಿಂದ ಕಾಳು ಮೆಣಸು ಕೃಷಿ ಸುದ್ದಿಯ ವೀಡಿಯೋಗ್ರಫಿಗೆ ಕೆ.ಬಿ.ದಿವಾಕರ್ ಪಡೆದುಕೊಂಡಿದ್ದಾರೆ.


ತೇನನ ರಾಜೇಶ್‌ರವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರವಾದ ಸ್ವಾತಂತ್ರ್ಯ ಭಾರತದ ಮೊದಲ ಜನರಲ್ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ ಪಡೆದುಕೊಂಡಿದ್ದಾರೆ.


ಉಳಿದಂತೆ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಅಳಿವಿನಂಚಿನಲ್ಲಿರುವ ಎರವ ಜನಾಂಗಕ್ಕೆ ಪ್ರೋತ್ಸಾಹ ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ ಪಡೆದುಕೊಂಡಿದ್ದಾರೆ. ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಉತ್ತಂಗ ಕಂಡಿದ್ದ ಸ್ಕೇಟಿಂಗ್ ಕ್ರೀಡೆ ರಿಂಕ್ ಹಾಕಿ ನೆನೆಗುದಿಯಲ್ಲಿ ವರದಿಗೆ ಕಾಯಪಂಡ ಶಶಿ ಸೋಮಯ್ಯ ಪಡೆದುಕೊಂಡಿದ್ದಾರೆ.


ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ಚಟುವಟಿಕೆ ಮೂಲಕವೇ ಎಲ್ಲಾ ವಿಷಯಗಳ ಕಲಿಕೆ ವರದಿಗೆ ರವಿ.ಎಸ್ ಪಡೆದುಕೊಂಡಿದ್ದಾರೆ. ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಪಬ್ಲಿಕ್ ಟಿವಿನಲ್ಲಿ ಪ್ರಸಾರವಾದ ವರ್ಷದ ಬಳಿಕ ತವರಿಗೆ ಮರಳಿದ ಕುಶ ಆನೆ ವರದಿಗೆ ಮಲ್ಲಿಕಾರ್ಜುನ ಪಡೆದುಕೊಂಡಿದ್ದಾರೆ.


ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿಗೆ ಚಿತ್ತಾರ ಚಾನಲ್ನಲ್ಲಿ ಪ್ರಸಾರವಾದ ಮಾಜಿ ಯೋಧನ ೧೦೩ರ ಬದುಕು ವರದಿಗೆ ವಿಶ್ವ ಕುಂಬೂರು ಪಡೆದುಕೊಂಡಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಚಾನಲ್ ೨೪ ನಲ್ಲಿ ಪ್ರಸಾರವಾದ ವರ್ಷಗಳ ಬಳಿಕ ಬೆಳಕು ಕಂಡ ಬಾಲೆ ವರದಿಗೆ ಕಿಶೋರ್ ರೈ ಕತ್ತಲೆಕಾಡು ಪಡೆದುಕೊಂಡಿದ್ದಾರೆ.


ಆರೋಗ್ಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಜಿಲ್ಲೆಯಲ್ಲಿ ಮೊದಲ ಯಶಸ್ವಿ ಟಿಎಚ್‌ಎ ಶಸ್ತ್ರಚಿಕಿತ್ಸೆ ವರದಿಗೆ ಆನಂದ್ ಕೊಡಗು ಪಡೆದುಕೊಂಡಿದ್ದಾರೆ. ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಬೇಸಿಗೆಯಲ್ಲಿ ಎರಡನೇ ಭತ್ತ ಬೆಳೆಯುತ್ತಿರುವ ರೈತ ವರದಿಗೆ ಎಚ್.ಕೆ.ಜಗದೀಶ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ನಿಶಾನೆಮೊಟ್ಟೆಯಲ್ಲಿ ಮತ್ತೆ ಹರಳುಕಲ್ಲು ದಂಧೆ ವರದಿಗೆ ಕುಯ್ಯಮುಡಿ ಸುನಿಲ್ ಪಡೆದುಕೊಂಡಿದ್ದಾರೆ.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.