ಜಿಲ್ಲೆ

ಉತ್ತರ ಭಾರತ ಸರಗಳ್ಳರ ಗ್ಯಾಂಗ್​ನ ನಾಲ್ವರ ಸೆರೆ

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಉತ್ತರಭಾರತ ಗ್ಯಾಂಗ್​ನ ಇನ್ನೂ ನಾಲ್ವರು ಆರೋಪಿಗಳನ್ನು ಮಲ್ಲೇಶ್ವರ ಉಪವಿಭಾಗ ಪೊಲೀಸರು ಸೆರೆ ಹಿಡಿದಿದ್ದಾರೆ.

ಆ.31ರಂದು ಪಂಜಾಬ್​ನ ಸಂಜಯ್ಕುಮಾರ್ (30) ಹಾಗೂ ಉತ್ತರಪ್ರದೇಶದ ಸುಹಾಸ್ (30) ಎಂಬ ಸರಗಳ್ಳರ ಕಾಲಿಗೆ ರಾಜಾಜಿನಗರ ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದರು. ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ರಾಜಸ್ಥಾನದ ಚಗನ್​ಲಾಲ್ ಮಾಲಿ (27), ಪಂಜಾಬ್​ನ ಅರ್ಜುನ್ ಸಿಂಗ್ (32), ರಾಕೇಶ್ (40) ಹಾಗೂ ಸೋನುಕುಮಾರ್ ಕನೌಜಿಯಾ (27) ಬಂಧಿಸಲಾಗಿದೆ. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 368 ಗ್ರಾಂ ಒಡವೆ , 2 ಬೈಕ್ ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಉತ್ತರ ಭಾರತದಿಂದ ನಗರಕ್ಕೆ ಬಂದಿದ್ದ ಗ್ಯಾಂಗ್ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ನಸುಕಿನ ಜಾವ ಮತ್ತು ಸಂಜೆ ವೇಳೆ ಬೈಕ್​ನಲ್ಲಿ ಸುತ್ತಾಡಿ ಮಹಿಳೆಯರ ಚಿನ್ನದಸರ ದೋಚುತ್ತಿದ್ದರು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಕೃತ್ಯ ಎಸಗಿದ್ದಾರೆ. 2014ರಲ್ಲಿ ಅರ್ಜುನ್ ಸಿಂಗ್ ಮತ್ತು ಸಂಜಯ್ ತಮಿಳುನಾಡಿನಲ್ಲಿ 15 ಕಡೆ ಸರಗಳವು ಮಾಡಿ ಜೈಲು ಶಿಕ್ಷೆ ಅನುಭವಿಸಿ, ಇದೇ ಫೆಬ್ರವರಿ ಯಲ್ಲಿ ಬಿಡುಗಡೆಯಾಗಿದ್ದರು. ಮತ್ತೊಬ್ಬ ಆರೋಪಿ ಚಗನ್​ಲಾಲ್, ವಂಚನೆ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು.

ಈ ವೇಳೆ ಜೈಲಿನಲ್ಲಿದ್ದಾಗ ಅರ್ಜುನ್ ಮತ್ತು ಸಂಜಯ್ಗೆ ಚಗನ್​ಲಾಲ್ ಪರಿಚಯವಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಊರುಗಳಿಗೆ ತೆರಳಿ ಗ್ಯಾಂಗ್ ರಚಿಸಿಕೊಂಡು ನಗರಕ್ಕೆ ಬಂದು ನೆಲೆಸಿದ್ದರು. ಮೇ ತಿಂಗಳಲ್ಲಿ ಚಗನ್​ಲಾಲ್ ಯಲಹಂಕದಲ್ಲಿ ಸರಗಳ್ಳತನ ಮಾಡಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಇದಾದ 10 ದಿನದಲ್ಲಿ ಜಾಮೀನು ಪಡೆದು ಹೊರಬಂದು ತನ್ನ ಕೃತ್ಯವನ್ನು ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.