ಮಂಗಳೂರು : ನಿರೀಕ್ಷೆಯಂತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ವಿ.ಮೋಹನ್ ವಿಜೇತರಾಗಿದ್ದು, ಸದ್ಯ ಕರಾವಳಿಯ ನಾಲ್ಕು ಮಂದಿ ಪರಿಷತ್ ಪ್ರತಿನಿಧಿಸುವ ಅವಕಾಶ ಪಡೆದಂತಾಗಿದೆ. ದ.ಕ. ಜಿಲ್ಲೆಯ ಮಂಜುನಾಥ ಭಂಡಾರಿ ಮತ್ತು ಐವನ್ ಡಿಸೋಜಾ ಪರಿಷತ್‌ನ ಹಾಲಿ ಸದಸ್ಯರಾಗಿದ್ದು, ಪಿ.ವಿ.ಮೋಹನ್ ಆಯ್ಕೆಯಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ ಮೂರಕ್ಕೇರಿದೆ. ಕಿಶೋರ್ ಕುಮಾರ್ ಪುತ್ತೂರು ಈಗ ಕರಾವಳಿಯ ಏಕೈಕ ಬಿಜೆಪಿ ಎಂಎಲ್‌ಸಿ.
ವಿಧಾನಸಭೆ ಸದಸ್ಯರ ಮೂಲಕ ಪರಿಷತ್‌ಗೆ ಆಯ್ಕೆಯಾಗಿರುವ ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಅವರ ಸದಸ್ಯತ್ವದ ಅವಧಿ ಜೂ.30ಕ್ಕೆ ಹಾಗೂ ರಾಜ್ಯಪಾಲರಿಂದ ನಾಮ ನಿರ್ದೇಶಕಗೊಂಡಿರುವ ಸದಸ್ಯೆ ಮಂಗಳೂರು ಮೂಲದ ಭಾರತಿ ಶೆಟ್ಟಿ ಅವರ ಸದಸ್ಯತ್ವದ ಅವಧಿ ಜು.21ಕ್ಕೆ ಪೂರ್ಣಗೊಳ್ಳಲಿದೆ.
2022ರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ದ.ಕ.-ಉಡುಪಿ ದ್ವಿ ಸದಸ್ಯ ಕ್ಷೇತ್ರದಿಂದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಚುನಾಯಿತರಾಗಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಸಂಸದರಾದ ಕಾರಣ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಗೆದ್ದು ಪರಿಷತ್ ಪ್ರವೇಶಿಸಿದ್ದರು.
2018ರಲ್ಲಿ ವಿಧಾನಸಭೆ ಸದಸ್ಯರ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. 2024ರ ಜೂನ್‌ನಲ್ಲಿ ಅವರ ಸದಸ್ಯತ್ವದ ಅವಧಿ ಪೂರ್ಣಗೊಂಡಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ಐವನ್ ಡಿಸೋಜಾ ಅವರು ಪರಿಷತ್ ಸ್ಥಾನ ಪಡೆಯಲು ಯಶಸ್ವಿಯಾದರು.
ಐವನ್ ಡಿಸೋಜಾ ಅವರು 2014ರಿಂದ 2020ರವರೆಗೆ ಪರಿಷತ್‌ಗೆ ರಾಜ್ಯಪಾಲರಿಂದ ನಾಮ ನಿರ್ದೇಶಕಗೊಂಡ ಸದಸ್ಯರಾಗಿದ್ದರು. ಈಗ 2ನೇ ಬಾರಿ ಪರಿಷತ್ ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.