ಬೆಂಗಳೂರು: ರಾಜ್ಯದಲ್ಲಿ ಕರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿಯೂ ಸಹ ಏರಿಕೆ ಕಾಣುತ್ತಿದ್ದು, ಇಂದು ರಾಜ್ಯದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 19ಕ್ಕೆ ತಲುಪಿದೆ.
ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಒಬ್ಬ ವ್ಯಕ್ತಿಯಲ್ಲಿ ಕರೊನಾ ಸೋಂಕಿರುವುದು ದೃಢವಾಗಿತ್ತು. 32 ವರ್ಷದ ಆತನ ಮೆಕ್ಕಾ ಪ್ರವಾಸದಿಂದ ಭಾರತಕ್ಕೆ ಹಿಂತಿರುಗಿದ್ದ, ಅದಾದ ನಂತರ ಬೆಂಗಳೂರಿನಲ್ಲಿ ಎರಡು ಪ್ರಕರಣ ಪತ್ತೆಯಾಗಿದ್ದವು. ಇದೀಗ ಗೌರಿಬಿದನೂರಿನಲ್ಲಿ ಪತ್ತೆಯಾದ ಸೋಂಕಿತನ ತಾಯಿಗೂ ಸಹ ಸೋಂಕು ತಗುಲಿರುವುದು ದೃಢವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಮಗನ ಜತೆ ತಾಯಿಯೂ ಸಹ ಮೆಕ್ಕಾ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ.
ಸೋಂಕು ಧೃಢವಾಗಿರುವ ಅಮ್ಮ ಮಗ ಗೌರಿಬಿದನೂರಿನ ಹಿರೇಬಿದನೂರಿನ ಗ್ರಾಮದವರಾಗಿದ್ದು ಮುಂಜಾಗ್ರತಾ ಕ್ರಮವಾಗಿ ಪೂರ್ತಿ ನಗರಕ್ಕೇ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸೋಂಕಿತ ವ್ಯಕ್ತಿ 24 ಜನರೊಂದಿಗೆ ಸಂಪರ್ಕ ಹೊಂದಿದ್ದು ಅವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗ ರಾಜ್ಯ ಎರಡನೇ ಹಂತದಲ್ಲಿದೆ. 3 ಮತ್ತು ನಾಲ್ಕನೇ ಹಂತ ಅತ್ಯಂತ ಮಹತ್ತರ ಘಟ್ಟಗಳಾಗಿದ್ದು ಅದನ್ನು ನಾವು ಎಚ್ಚರದಿಂದ ನಿಭಾಯಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ದುಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಬೆಂಗಳೂರಿನಲ್ಲಿ ಶಂಕಿತರಲ್ಲಿ ಸೋಂಕಿದೆ ಎಂದು ವರದಿ ಬಂದಿದೆ. ಆದರೆ ಅದನ್ನು ದೃಢ ಪಡಿಸಿಕೊಳ್ಳಲು ಪುಣೆಗೆ ಕಳಿಸಿದ್ದೇವೆ, ಪುಣೆಯಿಂದ ವರದಿ ಬಂದ ನಂತರವೇ ಅದನ್ನು ಅಧಿಕೃತವಾಗಿ ಘೋಷಿಸುತ್ತೇವೆ, ರಾಜ್ಯದ ಜನ ಎಚ್ಚರದಿಂದಿರಲಿ ಎನ್ನುವ ಕಾರಣಕ್ಕೆ ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಈಗಾಗಲೇ ಟ್ವೀಟ್ ಮಾಡಿದ್ದಾರೆ ಅಷ್ಟೇ ಎಂದು ಅವರು ನುಡಿದಿದ್ದಾರೆ.