ಜಿಲ್ಲೆ

ಕಳವು ಪ್ರಕರಣದ ಒಂದೇ ಕುಟುಂಬದ ನಾಲ್ವರ ಬಂಧನ

ಮೈಸೂರು: ಗುಂಪು ಕಟ್ಟಿಕೊಂಡು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ನಗರ ಸಿಸಿಬಿ ಪೊಲೀಸರು, 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.4 ಕೆ.ಜಿ ಬೆಳ್ಳಿ, 3 ಕಾರು, 2 ಪಿಸ್ತೂಲು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಕಳೆದ ಜೂನ್‌ನಲ್ಲಿ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾದನಹಳ್ಳಿಯಲ್ಲಿ 1.4 ಲಕ್ಷ ರೂ. ಚಿನ್ನಾಭರಣ ಕಳವಾಗಿತ್ತು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಜುಲೈ 16ರಂದು ಆರೋಪಿಯನ್ನು ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ವಶಕ್ಕೆ ಪಡೆದು, ಉಳಿದವರನ್ನೂ ಹಂತ ಹಂತವಾಗಿ ಬಂಧಿಸಲಾಯಿತು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಆರೋಪಿ ಮೇಲೆ 21 ಸರಗಳವು, 14 ಮನೆಗಳವು ಹಾಗೂ ಒಂದು ದ್ವಿಚಕ್ರ ವಾಹನ ಕಳವು ಸೇರಿದಂತೆ 36 ಪ್ರಕರಣಗಳಿವೆ. ಎರಡನೇ ಆರೋಪಿ 17, ಮೂರನೇ ಆರೋಪಿ 18 ಹಾಗೂ ನಾಲ್ಕನೇಯವನ ಮೇಲೆ 3 ಪ್ರಕರಣ ಸೇರಿದಂತೆ 74 ಪ್ರಕರಣಗಳಿವೆ. ಏ.27ರಂದು ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಆರೋಪಿಯು ಗುಂಪು ಕಟ್ಟಿಕೊಂಡು ಜಿಲ್ಲೆ ಸೇರಿದಂತೆ ಮಂಡ್ಯ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ತುಮಕೂರು ಹಾಗೂ ಬೆಂಗಳೂರಿನಲ್ಲೂ ಕಳವು ಕೃತ್ಯ ನಡೆಸಿದ್ದಾನೆ. 11 ಪ್ರಕರಣಗಳನ್ನು ಭೇದಿಸಲಾಗಿದೆ. ಮೂರನೇ ಆರೋಪಿಯಿಂದ 4 ಕೆ.ಜಿ 66 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

37 ಜನರ ವಶ:

ಮಾದಕ ವಸ್ತು ಮಾರಾಟ ಪತ್ತೆ ಕಾರ್ಯಾಚರಣೆಯನ್ನು ಒಂದು ತಿಂಗಳಿಂದ ತೀವ್ರಗಳಿಸಿರುವ ನಗರ ಪೊಲೀಸರು, 19 ಪ್ರಕರಣದಲ್ಲಿ 37 ಆರೋಪಿಗಳನ್ನು ಬಂಧಿಸಿದ್ದಾರೆ. ಒಡಿಶಾ, ಆಂಧ್ರ ಪ್ರದೇಶ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, 41 ಕೆ.ಜಿ.ಗಾಂಜಾ, 11 ಗ್ರಾಂ ಎಂಡಿಎಂ ಸಿಕ್ಕಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಸೈಬರ್ ವಂಚನೆ:

ಆನ್‌ಲೈನ್ ಷೇರು ವಹಿವಾಟಿನಲ್ಲಿ ಲಾಭ ತಂದುಕೊಡುವುದಾಗಿ ನಂಬಿಸಿ ವಂಚಿಸಿರುವ ಸಂಬಂಧ ಈ ವರ್ಷ 61 ಪ್ರಕರಣಗಳು ದಾಖಲಾಗಿದ್ದು, 32 ಕೋಟಿ ರೂ. ವಂಚನೆ ನಡೆದಿದೆ. ಆನ್‌ಲೈನ್ ಹೂಡಿಕೆಯ ಲಾಭದ ಆಮಿಷವೊಡ್ಡಿ ವಾಟ್ಸ್‌ಆ್ಯಪ್ ಗುಂಪು ರಚಿಸಿ, ನಕಲಿ ಆ್ಯಪ್‌ಗಳ ಲಿಂಕ್ ಹಾಕಿ ನೋಂದಾಯಿಸುವಂತೆ ಹೇಳುತ್ತಾರೆ. ಆರಂಭದಲ್ಲಿ ಲಾಭ ತೋರಿಸಿ, ನಂತರ ವಂಚಿಸುತ್ತಿದ್ದಾರೆ. ಡಿಮ್ಯಾಟ್ ಖಾತೆಗಳನ್ನು ತೆರೆಯದೇ ವಂಚಿಸಲಾಗುತ್ತಿದ್ದು, ಶಿಕ್ಷಿತರೇ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಅದಲ್ಲದೇ ಪಾರ್ಟ್‌ಟೈಮ್ ಉದ್ಯೋಗ, ರಿವ್ಯೆ ಬರಹದ ಆಮಿಷವೊಡ್ಡಿ, ಹಣ ನೀಡದೆ ವಂಚಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್.ಜಾಹ್ನವಿ, ಎಸಿಪಿ ಎಸ್.ಎನ್.ಸಂದೇಶ್ ಕುಮಾರ್ ಇದ್ದರು.

ಯಾವುದೋ ಕಾನೂನು ಸಂಸ್ಥೆಯೊಂದರಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ನಿಮಗೆ ಬಂದ ಪಾರ್ಸೆಲ್‌ನಲ್ಲಿ ಮಾದಕ ವಸ್ತು ಇದೆ. ಹಣ ಕೊಟ್ಟರೆ ಎಫ್‌ಐಆರ್ ಆಗುವುದಿಲ್ಲವೆಂದು ಬೆದರಿಸಿ, ಹಣ ದೋಚಲಾಗುತ್ತಿದೆ. ನಗರದಲ್ಲಿ ಇಂಥ 13 ಪ್ರಕರಣಗಳು ನಡೆದಿದ್ದು, ಕೆಲವರು 20 ಲಕ್ಷ ರೂ. ವರೆಗೆ ವಂಚಕರಿಗೆ ಹಣ ವರ್ಗಾಯಿಸಿದ್ದಾರೆ. ಸೈಬರ್ ಅಪರಾಧ ಪ್ರಕರಣ ಗೊತ್ತಾದರೆ 1930ಗೆ ಕರೆ ಮಾಡಿದರೆ, ಬ್ಯಾಂಕ್‌ನಲ್ಲಿರುವ ಹಣ ವರ್ಗಾವಣೆಗೆ ತಡೆಯೊಡ್ಡಲಾಗುವುದು.ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ