ಜಿಲ್ಲೆ

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

ದೇವದುರ್ಗ: ತಾಲೂಕಿನ ಸಿರವಾರ ಕ್ರಾಸ್ ಬಳಿ ಪ್ರಧಾನಮಂತ್ರಿ ಜಲಜೀವನ ಯೋಜನೆಯ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಪೈಪ್ ಕಳ್ಳತನ ಪ್ರಕರಣ ಸಂಬಂಧ ಪಟ್ಟಣ ಠಾಣೆ ಪೊಲೀಸರು ಶುಕ್ರವಾರ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಬಿ.ವೆಂಕಟೇಶ ಕನಕಪ್ಪ, ಬಾಲಪುರದ ಜಿ.ರಾಂಬಾಬು ರುಕ್ಕಯ್ಯ, ತೆಲಂಗಾಣದ ವನಪರ್ತಿಯ ಬಂದಲಯ್ಯ ನಾಗಯ್ಯ ನಾಯಕ ಹಾಗೂ ಗದ್ವಾಲ್‌ನ ಉಪ್ಪಾಲ ಗ್ರಾಮದ ಕೆ.ಆಂಜನೇಯಲು ವೆಂಕಟರಾಯಲು ಬಂಧಿತರು. ಅವರಿಂದ 6.17 ಲಕ್ಷ ರೂ. ಮೌಲ್ಯದ 34 ಕಬ್ಬಿಣದ ಪೈಪ್‌ಗಳನ್ನು ಜಪ್ತಿ ಮಾಡಲಾಗಿದೆ. ಪೈಪ್ ಸಾಗಿಸುತ್ತಿದ್ದ ಲಾರಿ, ಕಾರ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪಿಐ ಎಸ್.ಮಂಜುನಾಥ ತಿಳಿಸಿದ್ದಾರೆ.

ಸಿರವಾರ ಕ್ರಾಸ್‌ನಲ್ಲಿ ಜೆಜೆಎಂ ಕಾಮಗಾರಿಯ ಕಬ್ಬಿಣದ ಪೈಪ್‌ಗಳು ಹಾಗೂ ಪಟ್ಟಣದ ಜಾಲಹಳ್ಳಿ ಮುಖ್ಯರಸ್ತೆ ಸಮೀಪ ಜಮೀನಿನಲ್ಲಿ ಪೈಪ್ ಕಳ್ಳತನ ಮಾಡಿದ್ದರು. ಎಸ್ಪಿ ಪುಟ್ಟಮಾದಯ್ಯ ತನಿಖೆಗೆ ತಂಡ ರಚನೆ ಮಾಡಿದ್ದರು.

ಪಿಐ ಎಸ್.ಮಂಜುನಾಥ, ಸಿಬ್ಬಂದಿ ಶಿವಣ್ಣ, ಸೈಯದ್ ರಿಯಾಜ್, ಮಹೇಶ, ಹನುಮಂತಪ್ಪ, ಸಿದ್ದಪ್ಪ, ಅಜೀಂಪಾಷಾ, ಗೋಪಾಲಸಿಂಗ್ ತಂಡದಲ್ಲಿದ್ದರು. ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.