ಜಿಲ್ಲೆ

ಸಿಲಿಂಡರ್ ಸ್ಫೋಟಗೊಂಡು ನಾಲ್ವರಿಗೆ ಗಾಯ

ರೇಷ್ಮೆ ನಗರ ಡೆಸ್ಕ್

 ಗೃಹಬಳಕೆ ವಸ್ತು, ಮೇಲ್ಛಾವಣಿಗೆ ಹಾನಿ |  ಗಂಭೀರ ಗಾಯಗೊಂಡ ತಾಯಿ - ಮಗ ಬೆಂಗಳೂರು ಆಸ್ಪತ್ರೆಗೆ

 ಚಿಂತಾಮಣಿ: ತಾಲೂಕಿನ ಕರಿಯಪಲ್ಲಿ ಗ್ರಾಮದ ವೆಂಕಟೇಶ್ವರ ಶಾಲೆ ಸಮೀಪದ ಮನೆಯಲ್ಲಿ ಭಾನುವಾರ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ.

ಲಕ್ಷ್ಮೀದೇವಿ (32) ಮತ್ತು ಪುತ್ರ ಹರ್ಷವರ್ಧನ್ (14), ಲಕ್ಷ್ಮೀದೇವಿ ಅಣ್ಣನ ಮಕ್ಕಳಾದ ಸಂಜಯ್ (13) ಹಾಗೂ ಹರಿಪ್ರಿಯಾ (11) ಗಾಯಗೊಂಡವರು. ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಲಕ್ಷ್ಮೀದೇವಿ ಮತ್ತು ಹರ್ಷವರ್ಧನ್‌ಗೆ ಗಂಭೀರ ಗಾಯಗಳಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದಿಂದ ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮೇಲ್ಛಾವಣಿಗೂ ಹಾನಿಯಾಗಿದೆ. ಕೆಲ ಗೃಹಬಳಕೆ ವಸ್ತುಗಳು ಸುಟ್ಟಿವೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.