ನರಗುಂದ: ಬೆಂಕಿ ತಗುಲಿದ ಪರಿಣಾಮ 4 ಮನೆ ಹಾಗೂ 4 ಹೊಟ್ಟಿನ ಮೇವಿನ ಬಣವೆಗಳು ಸುಟ್ಟು ಅಪಾರ ಪ್ರಮಾಣದ ಹಾನಿಯಾದ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ದಂಡಾಪುರ ಬಡಾವಣೆಯ ಶ್ರೀಉಡಚಾ ಪರಮೇಶ್ವರಿ ದೇವಸ್ಥಾನ ಬಳಿಯಿರುವ ಸಿಂಗಾರೆಪ್ಪ ಗಡೇಕಾರ ಎಂಬುವವರಿಗೆ ಸೇರಿದ 6 ಟ್ರ್ಯಾಕ್ಟರ್ ಹೊಟ್ಟು, 2 ಟ್ರ್ಯಾಕ್ಟರ್ ಬಿಳಿಜೋಳದ ಮೇವು, ಸಣ್ಣ ಯಲ್ಲಪ್ಪ ಸವದತ್ತಿ ಎಂಬುವರ 12 ಟ್ರ್ಯಾಕ್ಟರ್ ಹೊಟ್ಟು, 3 ಟ್ರ್ಯಾಕ್ಟರ್ ಮೇವು, ನಾಗಪ್ಪ ಶಿವಪ್ಪ ಗಸ್ತಿ ಎಂಬುವವರ 8 ಟ್ರ್ಯಾಕ್ಟರ್ ಹೊಟ್ಟು, 2 ಟ್ರ್ಯಾಕ್ಟರ್ ಮೇವು, ದೊಡ್ಡ ಯಲ್ಲಪ್ಪ ಫಕ್ಕೀರಪ್ಪ ಸವದತ್ತಿ ಎಂಬುವರಿಗೆ ಸೇರಿದ 10 ಟ್ರ್ಯಾಕ್ಟರ್ ಗೋದಿ, ಜೋಳ, ಶೇಂಗಾದ ಹೊಟ್ಟು ಹಾಗೂ 4 ಟ್ರ್ಯಾಕ್ಟರ್ ಬಿಳಿಜೋಳ, ಗೋವಿನಜೋಳದ ಮೇವು ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಲ್ಲದೆ, ಬಸವರಾಜ ಸಿದ್ದಪ್ಪ ಗಡೇಕಾರ ಎಂಬುವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯಲ್ಲಿಟ್ಟಿದ್ದ 50 ಸಾವಿರ ರೂ. ನಗದು, 3 ತೊಲ ಬಂಗಾರ, 5 ತೊಲ ಬೆಳ್ಳಿ, ಬೆಲೆಬಾಳುವ ಬಟ್ಟೆ ಹಾಗೂ ವಿವಿಧ ಧವಸ, ಧಾನ್ಯ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಅವರ ಮನೆ ಪಕ್ಕಕ್ಕೆ ಹೊಂದಿಕೊಂಡಿದ್ದ ಮಲ್ಲಪ್ಪ ಸಿದ್ದಪ ಗಡೇಕಾರ ಎಂಬುವರ ಮನೆ ಹಾಗೂ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 2 ಕ್ವಿಂಟಾಲ್ ಹತ್ತಿ, 30 ಸಾವಿರ ರೂ. ಮೌಲ್ಯದ ವಿವಿಧ ಕೃಷಿ ಪರಿಕರಗಳು, ಅಗತ್ಯ ದಿನಬಳಕೆಯ ವಸ್ತುಗಳು ಸುಟ್ಟು ಹೋಗಿವೆ.
ಬೆಂಕಿ ಅವಘಡದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಸಾವಿತ್ರಿ ಮಾದಪ್ಪನವರ ಮನೆಯಲ್ಲಿದ್ದ ವಾಶಿಂಗ್ ಮಷಿನ್, ಟಿವಿ, ತಿಜೋರಿ ಸುಟ್ಟಿದ್ದು ಮನೆಯ ಗೋಡೆಗಳು ಭಾಗಶ ಬಿರುಕು ಬಿಟ್ಟಿವೆ. ಮೂರ್ತೆಪ್ಪ ವಾಳ್ವೇಕರ್ ಎಂಬುವರ ಮನೆಯ ಕಿಟಕಿ, ಬಾಗಿಲುಗಳು ಸುಟ್ಟು ಗೋಡೆಗಳಿಗೆ ಅಪಾರ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿರುವ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.
ಭಾರಿ ಪ್ರಮಾಣದ ಬೆಂಕಿ ತಗುಲಿದ್ದರಿಂದ ನರಗುಂದ, ಸವದತ್ತಿ, ಅಣ್ಣಿಗೇರಿಯಿಂದ ಅಗ್ನಿಶಾಮಕ ವಾಹನ ಹಾಗೂ ಹೆಚ್ಚುವರಿ ಸಿಬ್ಬಂದಿಯಿಂದ ನಿರಂತರ 4 ಗಂಟೆಗಳ ಕಾರ್ಯಾಚರಣೆ ಬಳಿಕ ಜೆಸಿಬಿ ಸಹಾಯದೊಂದಿಗೆ ಬೆಂಕಿಯನ್ನು ನಂದಿಸಲಾಯಿತು. ಸ್ಥಳಕ್ಕೆ ಪುರಸಭೆ, ಪೊಲೀಸ್, ಅಗ್ನಿಶಾಮಕ, ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಂಪೂರ್ಣ ಮನೆಸುಟ್ಟು ಕರಕಲಾದ ಬಸವರಾಜ ಗಡೇಕಾರ, ಮಲ್ಲಪ್ಪ ಗಡೇಕಾರ ಕುಟುಂಬಸ್ಥರು ತಮ್ಮ ಹೆಂಡತಿ, ಸಣ್ಣಪುಟ್ಟ ಮಕ್ಕಳು ಹಾಗೂ ಅಳಿದುಳಿದ ಸರಂಜಾಮುಗಳನ್ನು ದೇವಸ್ಥಾನದ ಗೋಡೆ ಮೇಲೆ ಇಟ್ಟುಕೊಂಡು ಕುಳಿತಿರುವುದು ಕನಿಕರ ತರುವಂತಿತ್ತು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.