ಜಿಲ್ಲೆ

ಸವಣೂರನ ನಾಲ್ಕು ಪಟಾಕಿ ಮಾರಾಟ ಅಂಗಡಿಗಳಿಗೆ ಸೀಲ್

Haveri - Desk - Ganapati Bhat

ಸವಣೂರ: ಪಟ್ಟಣದ ನಾಲ್ಕು ಮದ್ದು (ಪಟಾಕಿ) ಮಾರಾಟ ಹಾಗೂ ಮದ್ದು ಸಂಗ್ರಹಣೆಯ ಅಂಗಡಿಗಳ ಮೇಲೆ ತಹಸೀಲ್ದಾರ್ ಗಣೇಶ ಸವಣೂರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ, ಮದ್ದು ಮಾರಾಟ ನಿಷೇಧಿಸಿ ಅಂಗಡಿಗಳಿಗೆ ಸೀಲ್ ಮಾಡಿದರು.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಟ್ಟಣದಲ್ಲಿ ಮದ್ದು ಮಾರಾಟ, ಮದ್ದು ಸಂಗ್ರಹಣೆ ಅಂಗಡಿಯ ಮಾಲೀಕರಾದ ಪುಟ್ಟಪ್ಪ ಮಹಾಲಿಂಗಪ್ಪ ದೇವಗಿರಿ, ಎಂ.ಎಂ. ಜಾಲೆಗಾರ್, ಮಹ್ಮದ್​ಆಶಿಫ್ ಜಾಲೆಗಾರ್, ಷಣ್ಮುಖಪ್ಪ ಬಸವರಾಜ್ ದೇವಗಿರಿ ಅವರುಗಳ ಅಂಗಡಿಗೆ ಭೇಟಿ ನೀಡಿದರು. ಅಂಗಡಿಗಳಲ್ಲಿ ಸಂಗ್ರಹಿಸಿದ ಮದ್ದು (ಪಟಾಕಿ )ಗಳನ್ನು ಪರಿಶೀಲಿಸಿ ಸಂಬಂಧಿಸಿದ ಮಾಲೀಕರು, ಪಂಚರ ಸಮಕ್ಷಮ ಅಂಗಡಿಗಳಿಗೆ ಕೀಲಿ ಹಾಕಿ ಸೀಲ್ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಸಿಪಿಐ ಆನಂದ ಒನಕುದರೆ, ಅಗ್ನಿ ಶಾಮಕದಳದ ಸಹಾಯಕ ಅಧಿಕಾರಿ ಪರಶುರಾಮ ಲಮಾಣಿ, ಪಿಡಬ್ಲ್ಯುಡಿ ಎಇಇ ಮಹಾಂತೇಶ ಕೆ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ತಂಡದಲ್ಲಿ ಇದ್ದರು.

ತಹಸೀಲ್ದಾರ್ ಗಣೇಶ ಸವಣೂರ ಮಾಹಿತಿ ನೀಡಿ, ಸೂಕ್ತ ವ್ಯವಸ್ಥೆ ಕಲ್ಪಿಸದೇ ಹೆಚ್ಚಿನ ಪ್ರಮಾಣದಲ್ಲಿ ಮದ್ದು ಸಂಗ್ರಸಿರುವ ಸಂದರ್ಭದಲ್ಲಿ ಅನಾಹುತ ಸಂಭವಿಸಿದರೆ ಮದ್ದಿನ ಅಂಗಡಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಮುಂದಿನ ಸೂಚನೆಯ ವರೆಗೂ ಮದ್ದು ಮಾರಾಟ ಹಾಗೂ ಸಂಗ್ರಹವನ್ನು ನಿಷೇಧಿಸಲಾಗಿದೆ. ನಿಮಯ ಮೀರಿ ಮದ್ದು ಮಾರಾಟ ಹಾಗೂ ಸಂಗ್ರಹ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.