ಜಿಲ್ಲೆ

ಇಥಿಯೋಪಿಯಾದ ನಾಲ್ಕು ಮಕ್ಕಳಿಗೆ ಮರುಜೀವ - ಜಯದೇವ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಚಿಕಿತ್ಸೆ

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಇಥಿಯೋಪಿಯಾದ ನಾಲ್ವರು ಮಕ್ಕಳಿಗೆ ರಿಯಾಯಿತಿ ದರದಲ್ಲಿ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದೆ. ನಾಲ್ವರು ಮಕ್ಕಳಲ್ಲಿ ಒಬ್ಬರಿಗೆ ಹೃದಯದಲ್ಲಿ ರಂಧ್ರವಿದ್ದರೆ, ಇಬ್ಬರ ಹೃದಯದ ಕವಾಟದಲ್ಲಿ ಆಡಚಣೆಯಿತ್ತು. ಮತ್ತೊಂದು ಮಗು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿತ್ತು. ಈ ಎಲ್ಲರೂ ಶಸಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 4ರಂದು ದಾಖಲಾಗಿದ್ದ ಈ ಮಕ್ಕಳಿಗೆ ಸಂಸ್ಥೆಯ ಡಾ. ಪ್ರಸನ್ನಸಿಂಹ, ಡಾ. ದಿವ್ಯ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಪ್ರತಿ ಸಾವಿರ ಶಿಶುಗಳಲ್ಲಿ 8ರಿಂದ 10 ಶಿಶುಗಳು ಜನ್ಮಜಾತ ರೋಗಗಳನ್ನು ಹೊಂದಿರುತ್ತಾರೆ. ಇಂತಹ ಮಕ್ಕಳಲ್ಲಿ ಸಾಮಾನ್ಯವಾಗಿ ಹೃದಯದಲ್ಲಿ ರಂಧ್ರವಾಗುವ ಅಥವಾ ಕವಾಟಗಳು ಕಿರಿದಾಗುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಸಮಸ್ಯೆ ಹೊಂದಿರುವವರಿಗೆ ಜ್ವರ, ಕೆಮ್ಮು, ನೆಗಡಿ, ಬೆಳವಣಿಗೆ ಕುಂಠಿತಗೊಳ್ಳುವಿಕೆ, ಚರ್ಮ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುವುದು ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.

ಚಿಕಿತ್ಸೆ ಪಡೆದುಕೊಂಡಿರುವ ಈ ನಾಲ್ಕು ಮಕ್ಕಳ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಇಥಿಯೋಪಿಯಾದ ರೋಟರಿ ಇಂಟರ್‌ನ್ಯಾಷನಲ್, ಏರ್‌ಲೈನ್ಸ್ ಮತ್ತು ಚಿಲ್ಡ್ರನ್ಸ್ ಹಾರ್ಟ್ ಫಂಡ್ ಹಾಗೂ ಬೆಂಗಳೂರಿನ ರೋಟರಿ ಇಂಟರ್‌ನ್ಯಾಷನಲ್ 3190 ಮತ್ತು ರೋಟರಿ ನೀಡಿ ಹಾರ್ಟ್ ಫೌಂಡೇಶನ್ ಶಸ್ತ್ರಚಿಕಿತ್ಸೆಗೆ ನೆರವು ನೀಡಿವೆ. ಈ ರೀತಿಯ ಚಿಕಿತ್ಸೆಗಳು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.