ಜಿಲ್ಲೆ

ಒಂದೇ ದಿನ ನಾಲ್ವರು ಮರಣ

Dakshina Kannada

ಮಂಗಳೂರು/ಬಂಟ್ವಾಳ/ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗಿದ್ದು, ಬುಧವಾರ 73 ಪ್ರಕರಣಗಳು ವರದಿಯಾಗಿವೆ. ಸೋಂಕಿತ ನಾಲ್ವರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನ 60 ವರ್ಷದ ವೃದ್ಧೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು ರಾತ್ರಿಯೇ ಮೃತಪಟ್ಟಿದ್ದಾರೆ.

ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಮೂವರು ಮೃತಪಟ್ಟಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ 73 ವರ್ಷದ ಪುರುಷ, ಕಿಡ್ನಿ ತೊಂದರೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ಪುರುಷ ಮತ್ತು ಡಯಾಬಿಟಿಸ್ ಸಹಿತ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 73ರ ವೃದ್ಧ ವಿಟ್ಲ ಕಸಬಾ ಗ್ರಾಮ ನಿವಾಸಿಯಾಗಿದ್ದು, ಕೆಲವು ದಿನಗಳ ಹಿಂದೆ ಪುತ್ರನಿಗೆ ಸೋಂಕು ತಗುಲಿತ್ತು. ಬಳಿಕ ಕುಟುಂಬದ ಏಳು ಮಂದಿಗೆ ಪಾಸಿಟಿವ್ ಬಂದಿತ್ತು. ಅವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದು ವಿಟ್ಲದಲ್ಲಿ ಕರೊನಾಕ್ಕೆ ಮೊದಲ ಬಲಿ. ತರಬೇತಿ ಪಡೆದ ಪಿಎಫ್‌ಐ ಕಾರ್ಯಕರ್ತರು ಮಸೀದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಪಾಸಿಟಿವ್ ಆಗಿರುವವರಲ್ಲಿ 11 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕಿಗೊಳಗಾದರೆ 23 ಮಂದಿ ಐಎಲ್‌ಐ ಲಕ್ಷಣಗಳನ್ನು ಹೊಂದಿದ್ದವರು. ಮೂವರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಇದ್ದರೆ ಮೂವರು ಗಲ್ಫ್‌ನಿಂದ ಮರಳಿದವರು. 32 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ.

104 ಡಿಸ್‌ಚಾರ್ಜ್: ಬುಧವಾರ ಒಂದೇ ದಿನ 104 ಮಂದಿ ಕರೊನಾಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಬಿಡುಗಡೆಯಾದವರ ಒಟ್ಟು ಸಂಖ್ಯೆ 1089ಕ್ಕೆ ತಲುಪಿದೆ. ಕರೊನಾ ಪಾಸಿಟಿವ್ ಆದವರ ಸಂಖ್ಯೆ 2525 ಆಗಿದ್ದು 1379 ಸಕ್ರಿಯ ಪ್ರಕರಣಗಳಾಗಿವೆ.

ಆ್ಯಂಟಿಜನ್ ಟೆಸ್ಟ್ ಶುರು: ದ.ಕ. ಜಿಲ್ಲೆಯಲ್ಲಿ ಆ್ಯಂಟಿಜನ್ ಟೆಸ್ಟ್ ಪ್ರಕ್ರಿಯೆ ಬುಧವಾರ ಆರಂಭಗೊಂಡಿದೆ. ಪಿಸಿಆರ್ ಟೆಸ್ಟ್‌ಗೆ ಹೋಲಿಸಿದರೆ ಆ್ಯಂಟಿಜನ್‌ನಲ್ಲಿ ಬಹಳ ಬೇಗ ಸೋಂಕಿಗೊಳಗಾಗಿರುವುದು ಗೊತ್ತಾಗುತ್ತದೆ ಎಂಬ ಕಾರಣಕ್ಕೆ 3500 ಕಿಟ್ ತರಿಸಲಾಗಿದೆ. ಇದು ಕೇವಲ ಸರ್ಕಾರಿ ಆಸ್ಪತ್ರೆಗಳಿಗಷ್ಟೇ ನೀಡಲಾಗಿದೆ. ಮುಖ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ, ತುರ್ತು ಶಸ್ತ್ರಕ್ರಿಯೆಗಳಿಗೆ ಮುನ್ನ ಅಗತ್ಯ ಪರೀಕ್ಷೆಗೆ, ನಿಧನರಾದವರ ಪರೀಕ್ಷೆಗೆ ಮೀಸಲಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್ ತಿಳಿಸಿದ್ದಾರೆ.

ಡಿಎಚ್‌ಒ ಬಿಡುಗಡೆ: ಕರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪೂರ್ಣಗೊಂಡ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿಯವರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ತಮ್ಮ ಊರಾದ ಕುಂದಾಪುರಕ್ಕೆ ತೆರಳಿದ್ದು, ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸೇವೆಗೆ ಮರಳುವ ನಿರೀಕ್ಷೆ ಇದೆ.

ಆಯುರ್ವೇದ ವೈದ್ಯೆಗೆ ಕರೊನಾ: ಪುತ್ತೂರು: ನಗರದ ಸರ್ಕಾರಿ ಆಸ್ಪತ್ರೆಯ 45 ವರ್ಷದ ಆಯುರ್ವೇದ ವೈದ್ಯೆಯೊಬ್ಬರಲ್ಲಿ ಬುಧವಾರ ಕರೊನಾ ದೃಢಪಟ್ಟಿದೆ. ಇವರು ರೋಗಿಗಳ ಪರೀಕ್ಷೆಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ದೃಢಪಟ್ಟಿದೆ. ಕೊಳ್ತಿಗೆ ಗ್ರಾಮದ ನಿವಾಸಿ 29 ವರ್ಷದ ಯುವಕನಿಗೆ ಕರೊನಾ ದೃಢಪಟ್ಟಿದೆ.