ಕುಶಾಲನಗರ: ಮಾದಾಪಟ್ಟಣ ಗ್ರಾಮದ ಆರ್.ಕೆ.ಲೇಔಟ್‌ನ ಹೊಸ ಮನೆ ಕಟ್ಟಡ ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ನಲ್ಲಿ ವಿವಿಧ ಮಾದರಿಯ 11 ಮಷಿನ್‌ಗಳನ್ನು ಕಳವು ಮಾಡಿದ್ದ ನಾಲ್ವರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಗೋಪಾಲ ಸರ್ಕಲ್‌ನ ಮಹಮದ್(19), ಎಚ್‌ಆರ್‌ಪಿ ಕಾಲನಿಯ ವಿ.ಬಿ.ಕೀರ್ತನ್(26), ಚೌಡೇಶ್ವರಿ ಬಡಾವಣೆಯ ವಿಶ್ರುತ(18) ಹಾಗೂ ಟೌನ್ ಕಾಲನಿಯ ಎಚ್.ಜಯಪ್ರಕಾಶ್(22) ಬಂಧಿತರು.
ಆರ್.ಕೆ.ಲೇಔಟ್‌ನ ಈಶ್ವರ್ ಅವರು ನಿರ್ಮಿಸುತ್ತಿರುವ ಮನೆ ಕಟ್ಟಡದ ಶೆಡ್‌ನಲ್ಲಿ ಆ.20ರಂದು ಕಟ್ಟಿಂಗ್ ಮಷಿನ್, ಡ್ರಿಲ್ಲಿಂಗ್ ಮಷಿನ್, ಏರ್‌ಬೋವರ್, ವ್ಯಾಕ್ಯೂಮ್ ಕ್ಲೀನರ್, ಗ್ರೆಂಡಿಂಗ್ ಮಷಿನ್ ಸೇರಿದಂತೆ ಒಟ್ಟು 11 ಮಷಿನ್‌ಗಳನ್ನು ಕಳವು ಮಾಡಿದ್ದರು.
ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿ 11 ಮಷಿನ್‌ಗಳು ಮತ್ತು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿಚಾರಣೆ ಸಂದರ್ಭ 2022, 2023ರಲ್ಲಿ ಅರಕಲಗೂಡು, ಬೆಟ್ಟದಪುರ, ಪಿರಿಯಾಪಟ್ಟಣ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಹಾಗೂ ಆರೋಪಿಗಳಾದ ಮಹಮದ್, ಕೀರ್ತನ್, ವಿಶ್ರುತ್ ವಿರುದ್ಧ ಈ ಹಿಂದೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು ಕಳವು ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆರೋಪಿಗಳಾದ ಕೀರ್ತನ್, ಜಯಪ್ರಕಾಶ್ ವಿರುದ್ಧ ಈ ಹಿಂದೆ ಸೋಮವಾರಪೇಟೆ, ಕುಶಾಲನಗರ ಟೌನ್, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್, ಕಳವು, ದರೋಡೆ, ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಪಿಐ ಬಿ.ಜೆ.ಪ್ರಕಾಶ್, ಪಿಎಸ್‌ಐ ಗೀತಾ, ಅಪರಾಧ ಪತ್ತೆ ದಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.