ಸುಣಧೋಳಿ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತವಾಗಿರುವುದು. 
ಜಿಲ್ಲೆ

ನಾಲ್ಕು ಸೇತುವೆ ಜಲಾವೃತ, ಸಂಚಾರ ಸ್ಥಗಿತ

ಶಂಕರ ಗೆಜ್ಜಿ

ಮೂಡಲಗಿ: ಪಶ್ಚಿಮಘಟ ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ನಾಲ್ಕು ಸೇತುವೆ ಭಾನುವಾರ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಘಟಪ್ರಭಾ ನದಿಗೆ 35 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬರುತ್ತಿದ್ದು, ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ತಾಲೂಕಿನ ಅವರಾದಿ, ಸುಣಧೋಳಿ, ವಡೇರಹಟ್ಟಿ, ಕಮಲದಿನ್ನಿ ಸೇತುವೆ ಜಲಾವತಗೊಂಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಲೂಕಾಡಳಿತ ನದಿ ತೀರದಲ್ಲಿಯೇ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸ್ಥಳೀಯ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಎಚ್ಚರಿಕೆ ವಹಿಸುವಂತೆ ಜನರಿಗೆ ತಿಳಿಸುತ್ತಿದ್ದಾರೆ.

ಘಟಪ್ರಬಾ ನದಿ ನೀರು ಹೊಲಗದ್ದೆಗಳಿಗೆ ನುಗ್ಗಿದ್ದು ಬೆಳೆಗಳು ಜಲಾವೃತವಾಗಿವೆ. ಹೀಗಾಗಿ ರೈತರು ನದಿ ದಡದಲ್ಲಿರುವ ಪಂಪ್‌ಸೆಟ್ ಸ್ಥಳಾಂತರಿಸುತ್ತಿದ್ದಾರೆ. ನದಿ ಪಕ್ಕದಲ್ಲಿರುವ ಗ್ರಾಮಗಳಲ್ಲಿ ಹಾವು, ಚೇಳುಗಳು ನುಗ್ಗುವ ಭೀತಿ ನಿವಾಸಿಗಳಿಗಿದೆ. ಅಲ್ಲದೆ ಪ್ರವಾಹ ಭೀತಿಯಲ್ಲೂ ಇದ್ದಾರೆ. ಘಟಪ್ರಭಾ ನದಿಗೆ ಹೆಚ್ಚಾಗಿ ನೀರು ಹರಿದುಬರುತ್ತಿದ್ದು, ಒಂದು ವೇಳೆ ಪ್ರವಾಹ ಎದುರಾದರೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಸೀಲ್ದಾರ್ ಮಹಾದೇವ ಸನ್ನಮುರಿ ತಿಳಿಸಿದ್ದಾರೆ.