ಕೊಲೆಯಾದ ಸ್ಥಳವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿ.ವೈ.ಎಸ್.ಪಿ ಮುರಳಿ ಗುರುವಾರ ಪರಿಶೀಲಿಸಿದರು. 
ಜಿಲ್ಲೆ

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ

ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ತೇಜಸ್ ಬೇಕರಿ ಮಾಲೀಕ ಚೇತನ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಸಾಗರ ಪೊಲೀಸರು 24 ಗಂಟೆ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಸಂತೋಷ್,ಮನೋಷ್ , ಯಶವಂತ್ ಮತ್ತು ನಾಗೇಶ್ ಬಂಧಿತರು. ಈ ನಾಲ್ವರು ಗುರುವಾರ ಸಂಜೆ ಬೇಕರಿ ಮಾಲೀಕ ಚೇತನ್‌ನನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಕೆಆರ್‌ಎಸ್-ಬಿಇಎಂಎಲ್ ರಸ್ತೆ ಯಲ್ಲಿರುವ ಬಸ್ತಿಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಚ್ಚು, ಲಾಂಗ್ ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನಲೆ: ಕೊಲೆ ಪ್ರಮುಖ ಆರೋಪಿ ಸಂತೋಷ್ ಪ್ರೇಯಸಿಯನ್ನು ಕೊಲೆಯಾದ ಚೇತನ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮೊಬೈಲ್‌ವೊಂದರಲ್ಲಿ ತನ್ನ ಪ್ರೇಯಸಿಯೊಂದಿಗೆ ಚೇತನ್ ಇರುವ ಚಿತ್ರ ನೋಡಿದ್ದ ಸಂತೋಷ್ ಕುಪಿತಗೊಂಡು ಕೊಲೆ ಮಾಡಲು ನಿರ್ಧರಿಸಿದ. ಸ್ನೇಹಿತರಾದ ಮನೋಜ್, ನಾಗೇಶ್ ಹಾಗೂ ಯಶವಂತ್ ಜತೆಗೂಡಿ ಚೇತನ್ ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಗುರವಾರ ಬೆಳಗ್ಗೆಯಿಂದ ಮದ್ಯಪಾನ ಮಾಡಿ ಸಂಜೆ ಚೇತನ್ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿ, ಹೊರ ಹೋಗಿದ್ದ ಚೇತನ್ ಬೇಕರಿ ಬಾಗಿಲ ಬಳಿ ವಾಪಸ್ಸಾದ ತಕ್ಷಣ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ತೀವೃವಾಗಿ ಗಾಯಗೊಂಡಿದ್ದ ಚೇತನ್ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದ. ಹತ್ಯೆಯಾದ ಚೇತನ್ ಪತ್ನಿ ಕಾವ್ಯಾ ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿ.ವೈ.ಎಸ್.ಪಿ ಮುರಳಿ ಸ್ಥಳ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದರು.

ಕೆ.ಆರ್.ಸಾಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷ ಪುನೀತ್ ನೇತೃತ್ವದಲ್ಲಿ ಪಿಎಸ್‌ಐ ರಮೇಶ್ ಕರ್ಕಿಕಟ್ಟೆ, ಎಎಸ್‌ಐ ದೇವರಾಜು, ನಟರಾಜು, ಪೊಲೀಸ್ ಸಿಬ್ಬಂದಿ ಸತೀಶ್ ಶ್ರೀಧರ್, ಯದುರಾಜ್, ರವೀಶ್, ಪ್ರಭುಸ್ವಾಮಿ, ಅನಿಲ್, ಚಾಲಕ ಜವರಲಾಲ್ ನೆಹರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.