ಹುಬ್ಬಳ್ಳಿ: ಬೇಕರಿ ಮಾಲೀಕನನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇಲ್ಲಿಯ ಘಂಟಿಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಟ್ಲಮೆಂಟ್‌ನ ಕೃಷ್ಣ ಇಂದರಗಿ (31), ಸುನೀಲ ಕನ್ಹೇಶ್ವರ (36), ಸತೀಶ ಇಂದರಗಿ (26), ಗಣೇಶ ಕಾಲನಿಯ ಕುಮಾರ ಬಿ.ಎಸ್. (40) ಬಂಧಿತರು.
ಬಂಧಿತರಿಂದ ಎರಡು ಬೈಕ್, ವರ್ಗಾಯಿಸಿದ್ದ 50 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.
ಯಲ್ಲಾಪುರ ಓಣಿಯ ಪಾಟೀಲ ಗಲ್ಲಿಯಲ್ಲಿ ಬೇಕರಿ ನಡೆಸುತ್ತಿದ್ದ ನೇಕಾರನಗರದ ಮಧು ಎಂ.ಟಿ. ಎನ್ನುವವರ ಬಳಿ ಮಹಿಳೆಯೊಬ್ಬರು ತಿನಿಸು ಜತೆಗೆ ಮೊಬೈಲ್ ಫೋನ್ ನಂಬರ್ ಕೂಡ ತೆಗೆದುಕೊಂಡು ಹೋಗಿದ್ದರು. ಮಹಿಳೆಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಕೃಷ್ಣ ಮತ್ತು ಕುಮಾರ ಎಂಬುವವರು ಮಧುಗೆ ಹೆದರಿಸಿ 50 ಸಾವಿರ ರೂ. ನಗದು ಫೋನ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದರು. ಬುಧವಾರ ಕೂಡ ಮತ್ತೆ 15 ಸಾವಿರ ರೂ. ಕೊಡಬೇಕು ಎಂದು ಒತ್ತಾಯಿಸಿದ್ದಲ್ಲದೇ ಬೇಕರಿಯಿಂದ ಮಧುನನ್ನು ಅಪಹರಣ ಮಾಡಿಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಈ ಕುರಿತು ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.