ಜಿಲ್ಲೆ

ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ಬಂಧನ

Hassan

ಹಾಸನ: ಪ್ರಿವೆಡ್ಡಿಂಗ್ ಶೂಟಿಂಗ್ ನೆಪದಲ್ಲಿ ನಗರದ ಇಬ್ಬರು ಫೋಟೊಗ್ರಾಫರ್‌ಗಳ ಮೇಲೆ ಹಲ್ಲೆ ನಡೆಸಿ 6.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಹಾಗೂ ಇತರ ಉಪಕರಣಗಳ ಕಸಿದುಕೊಂಡು ಪರಾರಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಸೂತ್ರಧಾರ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಪಾರೆಹೊಸಹಳ್ಳಿ ಗ್ರಾಮದ ಬಿ. ಛಲಪತಿ ಕಿರಣ (37) ನಾಪತ್ತೆಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿ.ಮಲ್ಲಿಕಾರ್ಜುನ (29), ಹೊಸಕೋಟೆ ಪಟ್ಟಣದ ಆನಂದ್ (23), ಚಿಕ್ಕಬಳ್ಳಾಪುರ ತಾಲೂಕು ಸುಗಟೂರು ಗ್ರಾಮದ ಬಾಬುಕುಮಾರ್ (22), ಹೊಸಕೋಟೆಯ ದಶರಥ (24) ಎಂಬುವರನ್ನು ಬಂಧಿಸಿ 6.50 ಲಕ್ಷ ರೂ. ಮೌಲ್ಯದ ಡ್ರೋಣ್ ಹಾಗೂ ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಘಟನೆ ಹಿನ್ನೆಲೆ: ಪ್ರಕರಣದ ಪ್ರಮುಖ ಆರೋಪಿ ಛಲಪತಿ ಫೋಟೊಗ್ರಫಿ ಮಾಡಿಕೊಂಡಿದ್ದಾನೆ. ಹಣದಾಸೆಗೆ ಫೋಟೊ ಶೂಟಿಂಗ್ ನೆಪದಲ್ಲಿ ಹೊರ ಜಿಲ್ಲೆಯ ಛಾಯಾಗ್ರಾಹಕರನ್ನು ಸಂಪರ್ಕಿಸಿ ದರೋಡೆ ಮಾಡುತ್ತಿದ್ದರು. ಪ್ರಿವೆಡ್ಡಿಂಗ್ ವಿಡಿಯೋ ಚಿತ್ರೀಕರಣಕ್ಕೆ ಹಾಸನ ಸಮೀಪದ ಶೆಟ್ಟಿಹಳ್ಳಿ ಚರ್ಚ್ ಅನ್ನು ಆಯ್ದುಕೊಂಡಿದ್ದರು. ಜಸ್ಟ್ ಡಯಲ್ ಮೂಲಕ ಹಾಸನದ ಪ್ರಕಾಶ್ ಎಂಬುವರನ್ನು ಸಂಪರ್ಕಿಸಿದ್ದ ಛಲಪತಿ ತನ್ನ ಕಾರ್ಯ ಸಾಧನೆಗೆ ಫೆ. 15ರ ಶನಿವಾರವನ್ನು ಗೊತ್ತು ಮಾಡಿಕೊಂಡಿದ್ದ. ಅಂದು ಬೆಳಗ್ಗೆ ಶೆಟ್ಟಿಹಳ್ಳಿ ಚರ್ಚ್‌ನಲ್ಲಿ ವಿಡಿಯೋ ಶೂಟಿಂಗ್ ಆಗಬೇಕೆಂದು ಹೇಳಿದ್ದ. 30 ಸಾವಿರ ರೂ.ಗೆ ಚಿತ್ರೀಕರಣ ಮಾತುಕತೆ ಮುಗಿದು 5 ಸಾವಿರ ರೂ.ಗಳನ್ನು ಮುಂಗಡ ಪಾವತಿ ಮಾಡಿದ್ದ ಎಂದರು.

ಹಾಸನದ ಉಮೇಶ್ ಹಾಗೂ ವಿಕ್ಕಿ ಎಂಬುವರಿಗೆ ಶೂಟಿಂಗ್ ಜವಾಬ್ದಾರಿ ವಹಿಸಿದ ಪ್ರಕಾಶ್ ಫೆ. 15ರ ಬೆಳಗ್ಗೆ 4 ಗಂಟೆಗೆ ಕ್ಯಾಮರಾ ಜತೆಗೆ ಸಿದ್ಧರಾಗುವಂತೆ ಸೂಚಿಸಿದ್ದರು. ಅದರಂತೆ ಇಬ್ಬರೂ ಬೆಳಗ್ಗೆ 5.30ಕ್ಕೆ ವಿಡಿಯೋ ಶೂಟಿಂಗ್‌ಗೆಂದು ಹೊರಟರು. ನಗರದ ಸಹ್ಯಾದ್ರಿ ವೃತ್ತದಲ್ಲಿ ಇಬ್ಬರನ್ನೂ ಕಾರಿನಲ್ಲಿ ಕೂರಿಸಿಕೊಂಡ ನಾಲ್ವರು ನವ-ವಧು ವರರು ಈ ಮೊದಲೇ ತೆರಳಿದ್ದಾರೆ ಎಂದು ಸುಳ್ಳು ಹೇಳಿದ್ದರು. ತಾಲೂಕಿನ ಜವೇನಹಳ್ಳಿ ಸಮೀಪ ಹೋಗುತ್ತಿದ್ದಂತೆ ಕಾರು ನಿಲ್ಲಿಸಿ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ , ಲಾಂಗ್ ತೋರಿಸಿ ಹೆದರಿಸಿ ಡ್ರೋನ್ ಹಾಗೂ ಕ್ಯಾಮರಾ, ಉಮೇಶ್‌ನ ಎರಡು ಚಿನ್ನದ ಉಂಗುರು ದೋಚಿ ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು.

ವಿಶೇಷ ತಂಡ ರಚನೆ:ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಮತ್ತು ಸಿಪಿಐ ಸತ್ಯನಾರಾಯಣ ನೇತೃತ್ವದಲ್ಲಿ ರಚನೆಯಾದ ವಿಶೇಷ ತಂಡ ಆರೋಪಿಗಳ ಮೊಬೈಲ್ ಟ್ರಾೃಕ್ ಜಾಡು ಹಿಡಿದು ಬೆಂಗಳೂರು, ಹೈದರಾಬಾದ್ ಹಾಗೂ ಇತರ ನಗರಗಳಲ್ಲಿ ಪರಿಶೀಲನೆ ನಡೆಸಿತು. ಆರೋಪಿಗಳು ಬೆಂಗಳೂರು, ಕೃಷ್ಣಗಿರಿ, ಮದನ್‌ಪಲ್ಲಿ, ಹೈದರರಾಬಾದ್, ಹೊಸಕೋಟೆ ಕಡೆಗಳಲ್ಲಿ ಓಡಾಡಿಕೊಂಡಿದ್ದರು. ಫೆ.24ರಂದು ಬೆಂಗಳೂರಿನ ಇಂದಿರಾನಗರದಲ್ಲಿ ಸೆರೆ ಸಿಕ್ಕಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.