ಮೈಸೂರು: ಹೊಯ್ಸಳ ಕರ್ನಾಟಕ ಸಂಘದ ಸಂಸ್ಥಾಪಕರ ದಿನಾಚರಣೆ, ಸಮುದಾಯದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಜು.14ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ತಿಳಿಸಿದರು.
ವಿಜಯನಗರ ಒಂದನೇ ಹಂತದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 10ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಘದ ಧರ್ಮದರ್ಶಿ, ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಉಪಸ್ಥಿತಿಯಲ್ಲಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತೇಜಸ್ವಿ ಸೂರ್ಯ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ‌್ನಹಳ್ಳಿ ಇತರರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಯ್ಸಳ ಕರ್ನಾಟಕ ಸಮುದಾಯದ 80 ವರ್ಷ ಮೇಲ್ಪಟ್ಟ 80 ಹಿರಿಯರಿಗೆ ಸನ್ಮಾನ, ಸಂಸ್ಥಾಪಕರ 20 ಕುಟುಂಬದ ಸದಸ್ಯರಿಗೆ ಗೌರವ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು. ಮುಖಂಡರಾದ ಸುಂದರಮೂರ್ತಿ, ವಿಜಯಕುಮಾರ್, ಎನ್.ಎಸ್.ಜಯಸಿಂಹ ಇದ್ದರು.