ಜಿಲ್ಲೆ

ಭ್ರೂಣ ಹತ್ಯೆ ತಡೆಗೆ ಕ್ರಮ ವಹಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಭ್ರೂಣ ಹತ್ಯೆ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಭ್ರೂಣ ಹತ್ಯೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆ ವಹಿಸಿ ಇಂತಹ ಕೃತ್ಯವನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಬಗ್ಗೆ ಸಾರ್ವಜನಿಕರ ಗಮನಕ್ಕೆ ಕಂಡುಬಂದಾಗ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ. ಈ ಮೂಲಕ ಭ್ರೂಣ ಹತ್ಯೆ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ಜಿಲ್ಲೆಯಿಂದ ಹಿಡಿದು ರಾಜ್ಯಮಟ್ಟದವರೆಗೂ ಸಂಘ ಸಂಸ್ಥೆಗಳಿವೆ. ಅವುಗಳಿಗೆ ಸರ್ಕಾರ ಸಹಕಾರ ನೀಡಲಿದೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಟ್ಟಡ ನಿರ್ಮಾಣವು ಆದಷ್ಟು ಬೇಗ ಪೂರ್ಣಗೊಳ್ಳಲಿ. ಈ ಮೂಲಕ ಬಹಳ ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ. ನೌಕರರು ಚಟುವಟಿಕೆಗಳು, ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆ ವೇದಿಕೆಯ ಅವಶ್ಯಕತೆ ಇದ್ದು, ಅವರದ್ದೇ ಆದ ಕಟ್ಟಡ ಹೊಂದಿರಬೇಕು. ಆಗ ಮಾತ್ರ ಎಲ್ಲ ಸಂಘ ಸಂಸ್ಥೆಗಳು ಬಹಳ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತವೆ. ಅಂತೆಯೇ ವೈದ್ಯಾಧಿಕಾರಿಗಳು ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಸಿ.ಎ.ಅರವಿಂದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಕಾರ್ಯದರ್ಶಿ ಡಾ.ಕೆ.ಎಂ.ಗಿರೀಶ್, ಖಜಾಂಚಿ ಡಾ.ಆರ್.ಜಿ.ಅನುಪಮಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಆರ್‌ಸಿಎಚ್ ಡಾ.ಅನಿಲ್ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಇತರರಿದ್ದರು.