Foundation stone laying canceled at Tubagere 
ಜಿಲ್ಲೆ

ತೂಬಗೆರೆಯಲ್ಲಿ ಶಂಕುಸ್ಥಾಪನೆ ರದ್ದು

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಿಗದಿಯಾಗಿದ್ದ ಹೈಟೆಕ್ ಮಾದರಿ ಶಾಲೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ಗೊಂದಲಗಳಿಂದಾಗಿ ರದ್ದಾಗಿದ್ದು, ಶಂಕುಸ್ಥಾಪನೆಗಾಗಿ ಬಂದಿದ್ದ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಾಪಸ್ ತೆರಳಿದ ಪ್ರಸಂಗ ನಡೆದಿದೆ.
ಹೈಟೆಕ್ ಶಾಲೆ, ಕಾಂಪೌಂಡ್, ಶೌಚಗೃಹ, ಗ್ರಂಥಾಲಯ ಸೇರಿ ಹೈಟೆಕ್ ಮಾದರಿ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡುವಿನ ಗೊಂದಲದಿಂದಾಗಿ ಕಾರ್ಯಕ್ರಮ ಮೊಟಕುಗೊಳ್ಳುವಂತಾಯಿತು.
ಈ ಹಿಂದೆ ಇಲ್ಲಿನ ಕ್ರೀಡಾ ಕ್ರೀಡಾಕೂಟಕ್ಕೆ ಆಗಮಿಸಿದ್ದ ಸಚಿವರು, ಗಾಂಧಿ ಜಯಂತಿಯಂದು ತೂಬಗೆರೆ ಹೋಬಳಿಯಲ್ಲಿ ಒಂದು ಶಾಲೆ ಆಯ್ಕೆ ಮಾಡಿಕೊಳ್ಳಿ. ಆ ಶಾಲೆಗೆ ತಡೆಗೋಡೆ, ಸುಸಜ್ಜಿತ ಶೌಚಗೃಹ, ಗ್ರಂಥಾಲಯ ಸೇರಿ ಮೂಲಸೌಕರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಿಮ ವರದಿ ನೀಡಿ:
ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಶಾಲೆ ಶಿಕ್ಷಕರು ಬೆಳಗಿನಿಂದಲೇ ವ್ಯವಸ್ಥೆ ಮಾಡಿಕೊಂಡಿದ್ದರು, ಆದರೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಟ್ಟಬೇಕೆಂದು ತೀರ್ಮಾನಕ್ಕೆ ಬಂದಿದ್ದರು. ಸ್ಥಳಕ್ಕೆ ಆಗಮಿಸಿದ ಸಚಿವರು, ಸ್ಥಳದಲ್ಲಿನ ಗೊಂದಲದ ಬಗ್ಗೆ ಆಲಿಸಿ ಮೊದಲು ಗೊಂದಲ ನಿವಾರಿಸಿಕೊಂಡು ಅಂತಿಮ ವರದಿ ನೀಡಿ ಬಳಿಕ ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿ ಸಚಿವರು ಸ್ಥಳ ತೆರವು ಮಾಡಿದರು.
ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜ್, ತೂಬಗರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ರವಿ ಸಿದ್ದಪ್ಪ ಹಾಜರಿದ್ದರು,