ಗಾಣಧಾಳ-ಶಿಡ್ಲಭಾವಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು. ಪಿಎಂಜಿಎಸ್‌ವೈ ಎಇಇ ಹೊನ್ನಪ್ಪ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ನಿಡಗುಂದಿ, ಪ್ರಮುಖರಾದ ಮಹೇಶ ಹಳ್ಳಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಅಪ್ಪಣ್ಣ ಜೋಶಿ ಇದ್ದರು.  
ಜಿಲ್ಲೆ

ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಲಿ, ಶಾಸಕ ಬಸವರಾಜ ರಾಯರಡ್ಡಿ ಸೂಚನೆ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಗಾಣದಾಳದಲ್ಲಿ ಸೋಮವಾರ ಗಾಣದಾಳ-ಶಿಡ್ಲಭಾವಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು. ಗ್ರಾಮೀಣ ಜನತೆ ಜಮೀನು, ಪಕ್ಕದ ಊರುಗಳಿಗೆ ಸಂಪರ್ಕಿಸುವ ಉದ್ದೇಶದಿಂದ ಗುಣಮಟ್ಟದ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು 9 ಕಾಮಗಾರಿ ಕೈಗೊಳ್ಳಲಾಗಿದೆ. ಸ್ಥಳೀಯ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕಾಮಗಾರಿ ಆರಂಭಿಸಬೇಕಾದರೇ ಅಫಡಿವಿಟ್ ಪಡೆಯುವ ಕಾಲ ಬಂದಿದೆ ಎಂದರು.

ಸಿಎಂ, ಸಚಿವರ ಕ್ಷೇತ್ರದಲ್ಲಿ ಇಷ್ಟು ಕೆಲಸಗಳು ನಡೆದಿಲ್ಲ. ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತಿದೆ. ಜನತೆ ಅಭಿವೃದ್ಧಿಗೆ ಸಹಕಾರ ನೀಡಬೇಕು. ಗಾಣದಾಳ ಬಸ್ ನಿಲ್ದಾಣ ನಿರ್ಮಾಣ ಬಗ್ಗೆ ಕೋರ್ಟ್‌ನಿಂದ ತಡೆಯಾಜ್ಞೆಗೆ ತರಲಾಗಿದೆ. ಅದನ್ನು ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗಲಿದೆ ಎಂದು ಹೇಳಿದರು.

ನೀರಾವರಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಏನೂ ಮಾಡಲಿಲ್ಲ. ಕೆರೆ ತುಂಬಿಸುವ ಯೋಜನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನೀರಾವರಿ ಮಾಡುವುದು ಸುಲಭದ ಕೆಲಸವಲ್ಲ. ನೀರು ಹಂಚಿಕೆ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು ಯಾರು ಏನೂ ಮಾಡಲು ಸಾಧ್ಯವಿಲ್ಲ. ಪಶು ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ನೀಡಿರುವ ಹನುಮಂತಪ್ಪ ಕಾರ್ಯ ಶ್ಲಾಘನೀಯ. ನಿವೇಶನ ನೀಡುವ ಮನೋಭಾವ ಎಲ್ಲರಲ್ಲೂ ಬರಲಿ ಎಂದರು.

ಪಿಎಂಜಿಎಸ್‌ವೈ ಎಇಇ ಹೊನ್ನಪ್ಪ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ನಿಡಗುಂದಿ, ಪ್ರಮುಖರಾದ ಮಹೇಶ ಹಳ್ಳಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಅಪ್ಪಣ್ಣ ಜೋಶಿ, ನಾಗರಾಜ ನವಲಹಳ್ಳಿ, ಸಿದ್ದು ಪೊಲೀಸ್ ಪಾಟೀಲ ಇತರರಿದ್ದರು.

ವಿಜಯವಾಣಿ ವರದಿ ಪ್ರಸ್ತಾಪ: ವಿಜಯವಾಣಿ ಪತ್ರಿಕೆಯಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆ ಕುರಿತು ಪ್ರಕಟವಾದ ವರದಿಯನ್ನು ಶಾಸಕ ಬಸವರಾಜ ರಾಯರಡ್ಡಿ ಪ್ರಸ್ತಾಪಿಸಿದರು. ಮೇ 5 ರಂದು ‘ರಾಜ್ಯ ಸರ್ಕಾರಕ್ಕೆ ಕೃಷ್ಣಾ ಅಗ್ನಿ ಪರೀಕ್ಷೆ’ ತಲೆಬರಹದಡಿ ಸಂಪೂರ್ಣ ಮಾಹಿತಿ ನೀಡಿದೆ. ಅದನ್ನು ತಾವೆಲ್ಲರೂ ಓದಿ ನೀರಾವರಿ ಕುರಿತು ತಿಳಿದುಕೊಳ್ಳಬೇಕು. ವಿಜಯವಾಣಿ ಸದಾ ಜನಪರ ವರದಿ ಬರೆಯುವಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.