ಜಿಲ್ಲೆ

ಎನ್‌ಇಪಿ ಜ್ಞಾನ-ವಿಜ್ಞಾನ ಬೆಸೆಯುವ ಸಾಧನ

reportermys

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅಭಿಮತ

ಮೈಸೂರು ವಿಶ್ವವಿದ್ಯಾಲಯ ಸಂಸ್ಥಾಪನಾ ದಿನಾಚರಣೆ

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಮರ್ಪಕ ಕೌಶಲ, ಜ್ಞಾನ ಮತ್ತು ವಿಜ್ಞಾನದ ಟಿಸಿಲುಗಳನ್ನು ಬೆಸೆಯುವ ಸಾಧನವಾಗಿದೆ. ಅಲ್ಲದೆ, ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ತಿಳಿಸಿದರು.


ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.


7 ದಶಕದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದು ಸಾಕಷ್ಟು ವಿದ್ಯಾರ್ಥಿಗಳು ಹೊರ ಬಂದಿದ್ದಾರೆ. ಆದರೆ, ಹೀಗೆ ಪದವಿ ಪಡೆದ ಎಷ್ಟೋ ಜನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಶ್ಚಿಮದಿಂದ ಬರುವುದೆಲ್ಲವೂ ಶ್ರೇಷ್ಠವೆಂದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬಿಂಬಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ ಮಕ್ಕಳಲ್ಲಿ ಕೌಶಲ ಬೆಳೆಸಿ ಉದ್ಯೋಗ ಸೃಷ್ಟಿಸುವ ವಾತಾವರಣ ನಿರ್ಮಾಣ ಮಾಡಬೇಕೆಂಬ ಆಶಯದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಲಾಗಿದೆ ಎಂದರು.


ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಏಕೆ ಅನುಷ್ಠಾನಗೊಳಿಸಬೇಕು ಎನ್ನುವುದರ ಕುರಿತು ಬಹಳ ವಿಶದವಾಗಿ ಮಾತನಾಡಿದ ಅವರು, ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಹಂತ ಹಂತವಾಗಿ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಆಡಳಿತ ನಡೆಸಲು ಶುರು ಮಾಡಿದರು. ಅದೇ ಸಮಯದಲ್ಲಿ ಅಮೆರಿಕವನ್ನು ವಸಾಹತು ಮಾಡಿಕೊಂಡಿದ್ದರು. ಅಲ್ಲಿ ಜನರಿಂದ ದೊಡ್ಡ ಮಟ್ಟದ ಕ್ರಾಂತಿ ನಡೆಯುತ್ತಿತ್ತು. ಆ ಕ್ರಾಂತಿ ಭಾರತದಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸಲು ಬ್ರಿಟಿಷರು ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿಯನ್ನು ಹಾಳುಗೆಡವಿದರು. ತಮ್ಮ ಆಡಳಿತದ ಅನುಕೂಲಕ್ಕೆ ತಕ್ಕಂತೆ ಕಾರಕೂನರಾಗಿ ಕೆಲಸ ಮಾಡಲಷ್ಟೇ ಲಾಯಕ್ಕಾಗುವ ಮಟ್ಟದ ಶಿಕ್ಷಣವನ್ನು ಕಲಿಸಿದರು. ನಮ್ಮ ದೇಶದ ಆಚಾರ, ವಿಚಾರ, ಸಂಸ್ಕೃತಿ, ಕಲೆ, ಸಂಗೀತ, ರಾಜಕೀಯ, ಚರಿತ್ರೆಗೆ ಬದಲಾಗಿ ಎಲ್ಲವನ್ನೂ ಯೂರೋಪಿಯನ್‌ಮಯ ಮಾಡಿದರು. ಆದ್ದರಿಂದಲೇ ಈಗಲೂ ಆ ಪ್ರಭಾವ ಶಿಕ್ಷಣ ವ್ಯವಸ್ಥೆಯಲ್ಲಿ ಇರುವುದರಿಂದ ನಾವು ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.


ಒಮ್ಮೆ ಬ್ರಿಟಿಷ್ ಸಾಮ್ರಾಜ್ಯದಿಂದ ಮದ್ರಾಸ್ ಬಂದರಿಗೆ ಹಡಗಿನ ಮೂಲಕ ಸಾವಿರಾರು ಟನ್ ಕಬ್ಬಿಣ ಬಂತು. ಆದರೆ, ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಅದಕ್ಕೆ ಕಾರಣ ಭಾರತದಲ್ಲಿ ಗುಡಿ ಕೈಗಾರಿಕೆಗಳು ಬಹಳ ಸದೃಢವಾಗಿದ್ದವು. ಜನರು ತಮಗೆ ಬೇಕಾದ ವಸ್ತುಗಳನ್ನು ಸ್ಥಳೀಯವಾಗಿ ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಹಾಗಾಗಿ, ಕಬ್ಬಿಣ ಕೊಳ್ಳಲು ಯಾರೂ ಬರಲಿಲ್ಲ. ಅದರಿಂದ ಬ್ರಿಟಿಷರು ತಮ್ಮ ವ್ಯಾಪಾರಕ್ಕೆ ಪೆಟ್ಟು ಬೀಳುತ್ತದೆ ಅಂದುಕೊಂಡು ಕೈಗಾರಿಕಾ ಕೇಂದ್ರೀಕರಣ ಮಾಡಿದರು. ಗುಡಿ ಕೈಗಾರಿಕೆಗಳನ್ನು ಮುಚ್ಚಿಸಿದರು. ಸದ್ಯ ಹೊಸ ಶಿಕ್ಷಣ ನೀತಿ ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ಮಾಡಲು ಬೇಕಾದ ಸಂಗತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.


ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ವಿವಿ ಸಂಸ್ಥಾಪನಾ ದಿನಾಚರಣೆ ಸಮಯದಲ್ಲಿ ಮುಮ್ಮುಡಿ ಕೃಷ್ಣರಾಜ ಒಡೆಯರ್ ನೆನೆಯಬೇಕು. ಹಿಂದುಳಿದವರಿಗೆ ಶಿಕ್ಷಣ ಎಂಬ ಬೀಜವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ನೆಟ್ಟರು. ನಾಲ್ವಡಿಯವರು ಆ ಪರಂಪರೆಯನ್ನು ಮುಂದುವರಿಸಿ ಮೈಸೂರು ವಿವಿಯನ್ನು ಸ್ಥಾಪನೆ ಮಾಡಿದರು. ಎಲ್ಲದರಲ್ಲೂ ಮೊದಲು ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಮೈಸೂರು ವಿವಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿದರು. ಕುಲಸಚಿವರಾದ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನಪ್ರಕಾಶ್ ಇದ್ದರು.