ಜಿಲ್ಲೆ

ಉಣಕಲ್ಲ ಕೆರೆ ಸುತ್ತ ದುರ್ಗಂಧ: ಸ್ವಚ್ಛತೆಗೆ ಕೈಗೊಂಡ ಕೋಟ್ಯಂತರ ರೂ. ವ್ಯರ್ಥ

ಗಣಪತಿ ಭಟ್ ಹುಬ್ಬಳ್ಳಿ

ಅಭಿವೃದ್ಧಿ, ನವೀಕರಣ, ಸ್ವಚ್ಛತೆ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದರೂ ನಗರದ ಉಣಕಲ್ಲ ಕೆರೆ ತುಂಬ ಹಸಿರು ಪಾಚಿಗಳು, ಜಲಕಳೆ (ಪಿಶಾಚಿ ತಾವರೆ) ಮತ್ತೆ ತುಂಬಿಕೊಂಡಿದ್ದು, ಕೆರೆ ಸುತ್ತಮುತ್ತ ದುರ್ಗಂಧ ಹೊರ ಸೂಸುತ್ತಿದೆ. ಕೆರೆಯಿಂದ ಹೊರಡುವ ಹೊಲಸು ವಾಸನೆಯಿಂದಾಗಿ ಸುತ್ತಲಿನ ಪರಿಸರದ ನಿವಾಸಿಗಳಿಗೆ ಈಗ ರೋಗ ಭೀತಿ ಶುರುವಾಗಿದೆ.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ 1ನೇ ಹಂತದಲ್ಲಿ 15 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಉಣಕಲ್ಲ ಕೆರೆ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ನಡೆಸಲಾಗಿದೆ. ಸುಮಾರು 260 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆ ಸುತ್ತಲೂ ವಾಕಿಂಗ್ ಪಾತ್ ನಿರ್ವಿುಸಿದ್ದು, ಸುತ್ತ ಯಾರೂ ಪ್ರವೇಶಿಸದಂತೆ ಕಬ್ಬಿಣದ ಸರಳಿನ ಬೇಲಿಯನ್ನೂ ಅಳವಡಿಸಲಾಗಿದೆ. ಜಲ ಕಳೆ ನಿವಾರಣೆಗೆ ಹಲವು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಕೆರೆಯಲ್ಲಿನ ಕಳೆ ತೆಗೆಯಲು ಸಾಧ್ಯವಾಗಿಲ್ಲ. ಮತ್ತದೇ ಪಾಚಿಗಟ್ಟಿದ ಹಸಿರು ಪರದೆಯಿಂದಾಗಿ ನೀರು ಸಂಪೂರ್ಣ ಕೊಳೆತು ನಾರುತ್ತಿದೆ. ಕೆರೆಯ ಸುತ್ತಲೂ ಉಸಿರು ಕಟ್ಟುವ ವಾತಾವರಣ ನಿರ್ವಣವಾಗಿದೆ.

ಕೆಟ್ಟ ವಾಸನೆ:

ಉಣಕಲ್ಲ ಕೆರೆ ಎಷ್ಟು ಮಲೀನಗೊಂಡಿದೆ ಎಂದರೆ ಈಗ ಬೆಳಗ್ಗೆ ವಾಯು ವಿಹಾರಿಗಳ್ಯಾರೂ ಅತ್ತ ಸುಳಿಯುತ್ತಿಲ್ಲ. ಏಕೆಂದರೆ ಕೆರೆಯ ಬಲಭಾಗದಲ್ಲಿ ಹೊರ ಸೂಸುವ ವಾಸನೆಯಿಂದ ಹತ್ತಿರ ಸುಳಿಯುವುದಕ್ಕೂ ಆಗುವುದಿಲ್ಲ. ಕಿಲೋಮೀಟರ್ ತನಕ ಇಲ್ಲಿನ ಪಾಚಿಗಟ್ಟಿದ ನೀರಿನ ವಾಸನೆಯಿಂದಾಗಿ ಜನರು ಹೈರಾಣವಾಗಿದ್ದಾರೆ. ಕೆರೆಯ ಸಮೀಪವೇ ಮನೆ, ಅಪಾರ್ಟ್​ವೆುಂಟ್​ಗಳು, ಹೋಟೆಲ್​ಗಳು ಇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸುತ್ತಲಿನ ಪರಿಸರದ ನಿವಾಸಿಗಳು ರೋಗ ಪೀಡಿತರಾಗುವುದು ಗ್ಯಾರಂಟಿ.

ಸುತ್ತಮುತ್ತಲಿನ ಬಡಾವಣೆಯ ಒಳಚರಂಡಿ (ಯುಜಿಡಿ) ನೀರು, ಹೋಟೆಲ್ ತ್ಯಾಜ್ಯಗಳ ಸೇರ್ಪಡೆಯಿಂದಾಗಿ ಕೆರೆ ಮಲೀನಗೊಳುತ್ತಿದೆ. ಮೊದಲು ಕೆರೆ ಪ್ರವೇಶಿಸುವ ಕೊಳಚೆ ನೀರನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಎಷ್ಟು ಹಣ ಸುರಿದರೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದ್ದು ಇದೀಗ ವ್ಯರ್ಥವಾಗಿದೆ.

ಸೊಳ್ಳೆಗಳ ಉತ್ಪತ್ತಿ ತಾಣ

ಕೊಳಚೆ ನೀರು ಕೆರೆ ಸೇರ್ಪಡೆಯಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿವರ್ತಿತವಾಗಿದೆ. ಸಂಜೆಯಾದರೆ ಸಾಕು ಮನೆಯಲ್ಲಿ ಕುಳಿತುಕೊಳ್ಳಲೂ ಆಗುತ್ತಿಲ್ಲ. ಅಷ್ಟೊಂದು ಸೊಳ್ಳೆಗಳು ಸೃಷ್ಟಿಯಾಗಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕೆರೆ ನೀರು ಸ್ವಚ್ಛಗೊಳಿಸಲು ಸ್ಮಾರ್ಟ್ ಸಿಟಿ ಕಂಪನಿಯವರು ತೇಲುವ ಲಿಲ್ಲಿ ಗಿಡಗಳ ಪ್ಲಾಂಟೇಶನ್ ಮಾಡಿದ್ದಾರೆ. ಪಿವಿಸಿ ಪೈಪ್​ಗಳನ್ನು ಚೌಕಾಕಾರದಲ್ಲಿ ಜೋಡಿಸಿ ಅದಕ್ಕೆ ಪ್ಲಾಸ್ಟಿಕ್ ಬಲೆ ಅಳವಡಿಸಲಾಗಿದೆ. ಈ ಸಸ್ಯಗಳು ಕರೆಯಲ್ಲಿ ಉತ್ಪತ್ತಿಯಾಗುವ ಕ್ರಿಮಿ, ಕೀಟಗಳು, ಜಲಚರಗಳನ್ನು ಹಿಡಿದು ನಾಶಪಡಿಸುತ್ತವೆ ಎನ್ನಲಾಗಿದೆ.

ಕೆರೆ ಖಾಲಿ ಮಾಡುವುದೊಂದೆ ಬಾಕಿ

ಕೆರೆ ಸ್ವಚ್ಛಗೊಳಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಹಲವು ಖಾಸಗಿ ಕಂಪನಿಗಳು, ಸ್ವಸಹಾಯ ಗುಂಪುಗಳು ಕೆರೆಯಲ್ಲಿನ ಪಿಶಾಚಿ ತಾವರೆ (ಜಲಕಳೆ) ನಿಮೂಲನೆ ಮಾಡಲು ನಿರಂತರವಾಗಿ ಶ್ರಮ ವಹಿಸಿವೆ. ಆದರೂ ಮಲೀನ ನೀರು ಸೇರ್ಪಡೆಯಿಂದಾಗಿ ಕೆರೆ ಮತ್ತೆ ತನ್ನ ಮೊದಲಿನ ಸ್ಥಿತಿಗೆ ತಲುಪುತ್ತಿದೆ. ಹೀಗಾಗಿ ಮಳೆಗಾಲದೊಳಗೆ ಸಂಪೂರ್ಣ ಕೆರೆಯನ್ನು ಖಾಲಿ ಮಾಡಬೇಕು. ಕೆರೆಗೆ ಸೇರ್ಪಡೆಯಾಗುವ ಕೊಳಚೆ ನೀರು ಬರುವಲ್ಲಿ ಶಾಶ್ವತವಾಗಿ ತಡೆಗೋಡೆ ನಿರ್ವಿುಸಿ ಬಂದ್ ಮಾಡಬೇಕು. ಮತ್ತೆ ಮಳೆಗಾಲದಲ್ಲಿ ಹೊಸ ನೀರಿನಿಂದ ಉಣಕಲ್ಲ ಕೆರೆ ತನ್ನ ಗತವೈಭವವನ್ನು ಹೊಂದಲಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಉಣಕಲ್ಲ ಕೆರೆ ದಡದಲ್ಲಿ ವಾಕಿಂಗ್ ಮಾಡಲೆಂದು ಬೆಳಗ್ಗೆ ಗೆಳೆಯರ ಜತೆ ಹೋಗಿದ್ದೆ. ಆದರೆ, ಕೆರೆಯ ನೀರಿನ ವಾಸನೆಯಿಂದಾಗಿ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಅಷ್ಟು ಕೆಟ್ಟ ವಾತಾವರಣ ನಿರ್ವಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಕೆರೆಯ ನೀರು ಸ್ವಚ್ಛತೆಗೆ ಕ್ರಮ ವಹಿಸಬೇಕು. | ರಾಘವೇಂದ್ರ ಶಿಂಧೆ, ಸಂತೋಷನಗರ ಹುಬ್ಬಳ್ಳಿ ಸುತ್ತಮುತ್ತಲಿನ ಬಡಾವಣೆಯಿಂದ ನಿತ್ಯ 8 ಮಿಲಿಯನ್ ಲೀಟರ್ ನೀರು ಉಣಕಲ್ಲ ಕೆರೆಗೆ ಬಂದು ಸೇರುತ್ತಿದೆ. ಒಳಚರಂಡಿ ನೀರು ಕೆರೆಗೆ ಸೇರುವುದನ್ನು ತಪ್ಪಿಸಲು 2.5 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. | ರುದ್ರೇಶ ಘಾಳಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ