ಮೈಸೂರು: ಪಂಚ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ, ಗಂಡನಿಂದ ಕಿತ್ತು ಹೆಂಡತಿಗೆ ಬಿಟ್ಟಿ ಭಾಗ್ಯ ನೀಡುತ್ತಿದೆ. ಈ ಮೂಲಕ ಜನರಿಗೆ ವಂಚನೆ ಮಾಡಿ ನಾಟಕವಾಗುತ್ತಿದೆ ಎಂದು ಮಾಜಿ ಸಂಸದ ಪ್ರತಾಪಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಕ್ತಿ ಯೋಜನೆ ಎಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ಈಗ ದರ ಏರಿಕೆ ಮಾಡುವ ಮೂಲಕ ಪುರುಷರ ಜೇಬಿಗೆ ಕತ್ತರಿ ಹಾಕಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದರು.
ಗೃಹಲಕ್ಷ್ಮಿಗೆ ಎರಡು ಸಾವಿರ ಕೊಟ್ಟು, ಮದ್ಯಪಾನದಲ್ಲಿ ಡಬಲ್ ವಸೂಲಿ ಮಾಡಿದರು. ಯುವ ನಿಧಿಯನ್ನು ಕೊಡಲೇ ಇಲ್ಲ. ಜನರಲ್ಲಿ ಜಾತಿಯ ವಿಷಬೀಜ ಬಿತ್ತಿ, ಜಾತಿ ಜಾತಿ ನಡುವೆ ದ್ವೇಷ ಮೂಡುವಂತೆ ಮಾಡಲಾಗುತ್ತಿದೆ ಎಂದು ದೂರಿದರು.
ಸರ್ಕಾರ ಹಾಗೂ ಸಚಿವರ ಕಿರುಕುಳದಿಂದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ಹೆಸರು ಇದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಕಿಡಿಕಾರಿದರು.
ಮೊದಲು ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು. ಭಂಡತನದಿಂದ ಮುಂದುವರಿದರೆ ಅವರ ಸಚಿವರು ಸಹ ಭಂಡತನ ಪ್ರದರ್ಶನ ಮಾಡುತ್ತಾರೆ. ರಾಜ್ಯವನ್ನು ಲೂಟಿ ಮಾಡುತ್ತಾರೆ. ಎಲ್ಲರೂ ಅಂಗಡಿ ತೆಗೆದು ಲೂಟಿ ಮಾಡುತ್ತಾರೆ ಎಂದರು.
ಹಿಟ್ ಆ್ಯಂಡ್ ರನ್ ರೀತಿಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಕೆಲಸವಾಗಿದೆ. ಈಶ್ವರಪ್ಪ ವಿಚಾರ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದವರು ಈಗ ಭಂಡತನ ಪ್ರದರ್ಶಿಸುತ್ತಿದ್ದಾರೆ. ನಿಮ್ಮ ಸಚಿವರ ಪಿಎಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೇಳುತ್ತೀರಾ? ನೀವು ನಿಮ್ಮ ಆರೋಪಗಳಿಗೆ ಸಾಕ್ಷಿ ಕೊಟ್ಟಿದ್ದೀರಾ? ಈಗ ಮಾತ್ರ ಸಾಕ್ಷಿ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರುನಲ್ಲಿ ಬ್ರಾೃಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೇಳಿ ಈಗ ಬೆಂಗಳೂರಿನಲ್ಲಿ ರಸ್ತೆಗಳು ಹಾಳಾಗಿದೆ. ಈ ಮೂಲಕ ಬ್ರ್ಯಾಂಡ್ ಬೆಂಗಳೂರು ಹೆಸರು ಹಾಳಾಗಿದೆ ಎಂದರು.