ಜಿಲ್ಲೆ

ಶಾಶ್ವತ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಸಂಸದ ಜಿ.ಎಸ್.ಬಸವರಾಜು ಸೂಚನೆ

ತುಮಕೂರು: ಕೇಂದ್ರ ಸರ್ಕಾರದ ಯೋಜನೆಗಳಿಂದ ಶಾಶ್ವತವಾದ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದು, ಅಧಿಕಾರಿಗಳು ಶ್ರಮವಹಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ(ದಿಶಾ) ಸಭೆಯಲ್ಲಿ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದು, ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣವಾಗಬೇಕು ಎಂದರು.

ಆಯುಷ್ಮಾನ್ ಕಾರ್ಡ್ ವಿತರಣೆ ವಿಳಂಬದ ಬಗ್ಗೆ ಸಂಸದರು ಅಸಮಾಧಾನ ಹೊರಹಾಕಿದರು, ಮಾರ್ಚ್ ಅಂತ್ಯದೊಳಗೆ 1 ಲಕ್ಷ ಕಾರ್ಡ್ ವಿತರಿಸಬೇಕು ಎಂದು ಜಿಪಂ ಸಿಇಒ ಶುಭಾಕಲ್ಯಾಣ್ ಡಿಎಚ್‌ಒ ಡಾ.ಚಂದ್ರಿಕಾಗೆ ಗುರಿ ನೀಡಿದರು.

ಜಲ ಸಂಪನ್ಮೂಲ ಯೋಜನೆಯಡಿಯಲ್ಲಿ ಕೆರೆಗಳನ್ನು ಗುರುತಿಸಿ, ಸಂಗ್ರಹವಿರುವ ನೀರು ಮತ್ತು ಒತ್ತುವರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಹಾಗೂ ಹೇಮಾವತಿ ಈ ಮೂರು ನದಿಗಳ ನೀರನ್ನು ಬಳಸಿಕೊಂಡು ಊರಿಗೊಂದು ಕೆರೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲು ಸಂಸದರು ಸೂಚಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಪ್ರಧಾನ ಮಂತ್ರಿ ಗ್ರಾಮೀಣ ಉದ್ಯೋಗ ಯೋಜನೆಯಡಿ 298 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅಭ್ಯರ್ಥಿಗಳ ಪಟ್ಟಿಯನ್ನು ವಿವಿಧ ಬ್ಯಾಂಕ್‌ಗಳಿಗೆ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಲಾಗಿದೆ. ಸಲ್ಲಿಸಿರುವ ಅರ್ಜಿಗಳಲ್ಲಿ ಕೇವಲ 29 ಜನರಿಗೆ ಮಾತ್ರ ಸಾಲ ಸೌಲಭ್ಯ ಮಂಜೂರಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿ ಎಂದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಷ್ಟು ಜನ ರೈತರು ಹನಿನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಯ ಲಾಭ ಪಡೆದಿದ್ದಾರೆ. ಈ ಸೌಲಭ್ಯ ವಂಚಿತ ರೈತರನ್ನು ಗುರುತಿಸಿ ಯೋಜನೆಯ ಲಾಭ ದೊರಕಿಸಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 277.57 ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ವಸತಿ ಯೋಜನೆಯಡಿ ಗುರುತಿಸಲಾಗಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ವಸತಿ ರಹಿತರಿಗೆ ನಿವೇಶನ ನೀಡುವಂತೆ ಸಂಸದರು ತಿಳಿಸಿದರು.

ಜಿಪಂ ಅಧ್ಯಕ್ಷೆ ಲತಾ, ವಿಧಾನ ಪರಿಷತ್‌ತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜಿಐಎಸ್ ಪ್ರಾಜೆಕ್ಟ್ ಡೈರೆಕ್ಟರ್ ಜಯಚಂದ್ರನ್ ಮತ್ತಿತರರು ಇದ್ದರು.

ರೈತರು ಪಡೆದಿರುವ ಸಾಲದ ಕಂತಿಗೆ ಅವರ ಮನರೇಗಾ ಕೂಲಿ, ಸಾಮಾಜಿಕ ಪಿಂಚಣಿ ಅಥವಾ ಸರ್ಕಾರದ ಯಾವುದೇ ಸಬ್ಸಿಡಿ ಮುರಿದುಕೊಂಡ ಬ್ಯಾಂಕ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ದೂರುಗಳಿದ್ದ ರೈತರು ನೇರವಾಗಿ ನನಗೆ ದೂರು ನೀಡಬಹುದು. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ