ಔರಾದ್: ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಮುಖ್ಯಮಂತ್ರಿ ರೈತ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ತಾಲೂಕಿನಲ್ಲಿ ಶೇ.90 ಬೆಳೆ ಮಳೆಗೆ ಆಹುತಿಯಾಗಿದ್ದು, ಶೀಘ್ರ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ನಾಶ ತಪ್ಪಿಸಲು ವನ್ಯಜೀವಿ ಸಂರಕ್ಷಿತ ಪ್ರದೇಶಗಳನ್ನು ನಿರ್ಮಿಸಬೇಕು. ಮುಖ್ಯಮಂತ್ರಿ ರೈತ ಸಮ್ಮಾನ್ ಯೋಜನೆ 4,000 ರೂ. ರೈತರ ಖಾತೆಗೆ ಜಮೆ ಮಾಡಬೇಕು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಆಗ್ರಹಿಸಿದರು.
ಪ್ರಮುಖರಾದ ಪ್ರಕಾಶ ಬಾವಗೆ, ಶಿವಾನಂದ, ಬಸವರಾಜ ಘೂಳೆ, ರಾಜಕುಮಾರ ಬಿರಾದಾರ, ಪ್ರವೀಣ ಕುಲಕರ್ಣಿ, ಕಲ್ಲಪ್ಪ ದೇಶಮುಖ, ಮನೋಹರರಾವ ಬಿರಾದಾರ, ಉತ್ತಮ ಮಾನೆ, ಬಾಬುರಾವ, ಶಿವರಾಜ, ನಾಗಪ್ಪ ಘುಳೆ, ರಮೇಶ ಪಾಟೀಲ್, ಬಸವಂತರಾವ, ಕಮಲಾಕರ ವಾಸರೆ, ತುಕಾರಾಮ ನಿಟ್ಟೂರೆ, ಸೈಯದ್, ವಿಶ್ವನಾಥ ಧರಣಿ ಇತರರಿದ್ದರು.
ಜಮೀನುಗಳಿಗೆ ಹೋಗುವ ದಾರಿ ಸುಧಾರಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಣ ರೈತರಿಗೆ ದೊರಕಿಸಿಕೊಡಬೇಕು. ಕೌಡಗಾಂವ್ ಹತ್ತಿರ ೩೩ ಕೆವಿ ವಿದ್ಯುತ್ ಸ್ಟೇಷನ್ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಲಾಯಿತು.