former protest 
ಜಿಲ್ಲೆ

ಪವರ್‌ಲೈನ್ ಅಳವಡಿಸುವ ಮೊದಲು ಪರಿಹಾರ ನೀಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಕಸಬಾ ಹೋಬಳಿಯ ಖಾನೆಹೊಸಹಳ್ಳಿಯಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೆ 220 ಕೆವಿ ಪವರ್ ತಂತಿ ಅಳವಡಿಸಲು ಬಂದಿದ್ದ ಕೆಪಿಟಿಸಿಎಲ್ ಸಿಬ್ಬಂದಿಯನ್ನು ಸ್ಥಳೀಯ ರೈತರು ತಡೆದು, ವಾಪಸ್ ಕಳುಹಿಸಿದರು.
ಖಾನೆಹೊಸಹಳ್ಳಿ ಬಳಿ ಇಪ್ಪತ್ತು ವರ್ಷಗಳ ಹಿಂದೆಯೇ ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಪವರ್ ಲೈನ್ ಹಾದು ಹೋಗಿದೆ. ಇದೇ ಪವರ್ ಲೈನ್‌ಗೆ ಈಗ ಹೆಚ್ಚುವರಿಯಾಗಿ 220 ಕೆವಿ ವಿದ್ಯುತ್ ಲೈನ್‌ಗಳನ್ನ ಹಾಕಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಕೆಪಿಟಿಸಿಎಲ್‌ನಿಂದ ಕಂಬ ಅಳಡಿಕೆಗೆ ಬಳಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲ. ಈಗ ರೈತರಿಗೆ ಮಾಹಿತಿ ನೀಡದೆ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಕೆಪಿಟಿಸಿಎಲ್ ದೌರ್ಜನ್ಯ ಖಂಡಿಸಿ ರೈತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಈ ವೇಳೆ ಮುಖಂಡ ತಿ.ರಂಗರಾಜು ಮಾತನಾಡಿ, 20 ವರ್ಷಗಳ ಹಿಂದೆ ಪವರ್ ಲೈನ್ ಅಳವಡಿಸಿದಾಗಲೂ ಪರಿಹಾರ ಕೊಟ್ಟಿಲ್ಲ, ಈಗ ಹೆಚ್ಚುವರಿ ಪವರ್ ಲೈನ್ ಅಳವಡಿಸುವಾಗಲು ರೈತರಿಗೆ ಪರಿಹಾರ ಕೊಟ್ಟಿಲ್ಲ, ಕಾಮಗಾರಿ ವೇಳೆ ಬೈರಸಂದ್ರಪಾಳ್ಯದ ಕೆಲ ರೈತರ ಅಡಿಕೆ, ನೀಲಿಗಿರಿ ಮರಗಳು ನಾಶವಾಗಿವೆ. ರಾಗಿ ಕೊಯ್ಲು ನೆಡೆಯುತ್ತಿದ್ದು, ಹೊಲಗಳಲ್ಲಿ ಕಾಮಗಾರಿ ನೆಪದಲ್ಲಿ ಟ್ರ್ಯಾಕ್ಟರ್‌ಗಳ ಓಡಾಟದಿಂದ ರಾಗಿ ಬೆಳೆ ನಷ್ಟವಾಗಿದೆ, ರೈತರಿಗೆ ಪರಿಹಾರ ಕೊಡದ ಹೊರತು ಕಾಮಗಾರಿಗೆ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದರು.
ಬಮುಲ್ ನಿರ್ದೇಶಕ ಬಿ.ಸಿ ಆನಂದ್ ಮಾತನಾಡಿ, ಪವರ್ ಲೈನ್ ಹಾದು ಹೋಗಿರುವ ತೋಟ ಮತ್ತು ಹೊಲಗಳಲ್ಲಿ ಕೃಷಿ ಮಾಡುವುದು ಅಪಾಯಕಾರಿ. ಯಾವುದೇ ಸಮಯದಲ್ಲಿ ರೈತರು ವಿದ್ಯುತ್ ಅವಘಡಗಳಿಗೆ ತುತ್ತಾಗಬಹುದು, ಈ ಜಾಗವನ್ನು ಸರ್ಕಾರ ವಶಕ್ಕೆ ಪಡೆದು ರೈತರಿಗೆ ಪರಿಹಾರ ನೀಡಬೇಕು ಮತ್ತು ಫೆನ್ಸಿಂಗ್ ಹಾಕುವ ಮೂಲಕ ವಿದ್ಯುತ್ ಅವಘಡಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.