ಜಿಲ್ಲೆ

ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿಕರು

reportermys

ಹಿರಿಕರ ರವಿ ಸೋಮವಾರಪೇಟೆ

ಅಗಾಗ್ಗೆ ಸುರಿಯುವ ಅಕಾಲಿಕ ಮಳೆಯಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ, ರೈತಪರ ಯೋಜನೆಗಳ ಕೊರತೆಯಿಂದ ಕೃಷಿ ಲಾಭದಾಯಕವಾಗಿಲ್ಲ ಎಂದು ರೈತರು ಹೇಳುತ್ತಾರೆ.

ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಂಗಳವಾರ ಕೂತಿ ಗ್ರಾಮದಲ್ಲಿ ಆಯೋಜಿಸಿದ್ದ ವಿಜಯವಾಣಿ ಸಂವಾದ ದಲ್ಲಿ ಪಾಲ್ಗೊಂಡಿದ್ದ ರೈತರು ತಮ್ಮ ಸಂಕಷ್ಟಗಳನ್ನು ತೆರೆದಿಟ್ಟರು.

ಭತ್ತ ಕಣಜವೆಂದೇ ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಲ್ಲಿ ರೈತರು ಭತ್ತ ಕೃಷಿಗೆ ಗುಡ್‌ಬೈ ಹೇಳುವ ಸ್ಥಿತಿಗೆ ತಲುಪಿವಂತಾಗಿದೆ. ಅದರಲ್ಲೂ ಶಾಂತಳ್ಳಿ ಹೋಬಳಿಯಲ್ಲಿ ಬಹುತೇಕ ರೈತರು ನಷ್ಟದ ನಡುವೆಯೇ ಭತ್ತ ಬೆಳೆಯುವುದನ್ನು ಮುಂದುವರಿಸಿದ್ದಾರೆ. ಅಕಾಲಿಕ ಮಳೆ ಹಾಗೂ ಕಾಡುಪ್ರಾಣಿಗಳ ಕಾಟದಿಂದ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಅಕ್ಟೋಬರ್‌ನಲ್ಲೂ ಅಕಾಲಿಕ ಮಳೆ ಸುರಿದಿತ್ತು. ಭತ್ತ ಕೊಯ್ಲಿಗೆ ಬಂದ ಡಿಸೆಂಬರ್ ಮೊದಲ ವಾರದಲ್ಲಿಯೂ ಮಳೆ ಬಿದ್ದಿದೆ. ಮೋಡದ ವಾತಾವರಣ ಮುಂದುವರಿದಿದೆ. ಭತ್ತ ಹಣ್ಣಾಗಿದ್ದು, ಮಳೆಯಿಂದ ಉದುರುತ್ತಿದೆ. ಕೊಯ್ಲು ಮಾಡಿದ ಭತ್ತ ಪೈರನ್ನು ಹೊತ್ತು ಭತ್ತವನ್ನು ಮನೆಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಡಿಸೆಂಬರ್ ಕೊನೆಯೊಳಗೆ ಶೇ.೯೦ ರಷ್ಟು ಕೊಯ್ಲು ಮುಗಿಯಬೇಕು. ಈಗ ಅಲ್ಪಸ್ವಲ್ಪ ಬೆಳೆಗಾರರು ಕೊಯ್ಲು ಮಾಡಿದ್ದಾರೆ. ಮಳೆಯಾಗುತ್ತಿ
ರುವ ಹಿನ್ನೆಲೆ ತಾಲೂಕಿನ ಬಹುತೇಕ ಕಡೆ ಕೊಯ್ಲು ಮಾಡಿದ ಭತ್ತದ ಪೈರಿನ ಮೇಲೆ ನೀರು ಶೇಖರಣೆಗೊಂಡಿದ್ದು, ಕೃಷಿಕರು ಆತಂಕಗೊಂಡಿ ದ್ದಾರೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ, ಎಡದಂಟೆ, ನಗರಳ್ಳಿ, ದೊಡ್ಡತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ
ಗ್ರಾಮಗಳಲ್ಲಿ ಹೆಚ್ಚಿನ ರೈತರು ಭತ್ತ ಬೆಳೆದಿದ್ದಾರೆ. ಇಲ್ಲಿ ಕಾಡುಕೋಣ, ಕಾಡುಹಂದಿ ಹಾವಳಿಯಿಂದ ಭತ್ತ ನಾಶವಾಗುತ್ತಿದೆ. ಫಸಲು ನಷ್ಟಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಈ ಭಾಗದಲ್ಲಿ ಸಿ ಮತ್ತು ಡಿ ಜಾಗವಿದ್ದು, ಇದುವರೆಗೆ ಹಕ್ಕುಪತ್ರ ನೀಡದರಿಂದ ಫಸಲು ಹಾನಿಗೆ ಪರಿಹಾರವು ಸಿಗದಂತಾಗಿದೆ ಎಂದು ರೈತರು ಬೇಸರ ವ್ಯಕ್ತ ಪಡಿಸಿದರು.

ಇನ್ನೊಂದು ಕಡೆ ಕಾರ್ಮಿಕರ ಕೊರತೆುಂದ ಬೆಳೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಭತ್ತ ಕೊಯ್ಲಿನ ಸಂದರ್ಭ ಬಯಲುಸೀಮೆಯಿಂದ ಕಾರ್ಮಿಕರ ತಂಡಗಳು ಗ್ರಾಮಗಳಿಗೆ ಬಂದು ತಿಂಗಳುಗಟ್ಟೆಲೆ ಇದ್ದು, ಭತ್ತ ಕೆಲಸ ಮುಗಿಸಿ ಹೋಗುತ್ತಿದ್ದರು.

ಅತೀವೃಷ್ಟ್ಟಿ, ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ಬೆಲೆ ಇಳಿಕೆ, ಸರ್ಕಾರದ ನಿರ್ಲಕ್ಷ್ಯ ಇವುಗಳಿಂದ ಬೇಸತ್ತ ಕೃಷಿಕರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಸಾಕಾಗುಷ್ಟು ಕೂಲಿ ಸಿಗುವುದಿಲ್ಲ ಎಂದು ಹೊರಗಿನ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ಸ್ಥಳೀಯವಾಗಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಕಾಫಿ ಕೊಯ್ಲು ಇರುವುದರಿಂದ ಕಾರ್ಮಿಕರು ಕಾಫಿ ತೋಟಗಳತ್ತ ಮುಖ ಮಾಡಿದ್ದಾರೆ. ಇವೆಲ್ಲಾ ಕಾರಣದಿಂದ ಅಧಿಕ ಕೂಲಿ ಕೊಡಲೇ ಬೇಕಾದ ಅನಿವಾರ್ಯತೆ ಒದಗಿದೆ ಎನ್ನುತ್ತಾರೆ.

ರೈತರೇ ಕಾಫಿ, ಕಾಳುಮೆಣಸು, ಬಾಳೆ, ಹಸಿಮೆಣಸು ಬೆಳೆಯುತ್ತಿದ್ದಾರೆ. ಯಾವುದೇ ಫಸಲು ಕೈಸೇರುತ್ತಿಲ್ಲ. ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ಮನೆಗೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಒದಗಿದೆ. ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ. ಹೇಗೆ ಕೃಷಿ ಮಾಡುವುದು ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು.

ಕೃಷಿ ಫಸಲು ಸಾಗಿಸಲು ರಸ್ತೆಗಳು ಚೆನ್ನಾಗಿರಬೇಕು. ಆದರೆ, ಗ್ರಾಮೀಣ ರಸ್ತೆಗಳು ಹಾಳಾಗಿವೆ. ಯಡದಂಟೆ ಗ್ರಾಮದ ರಸ್ತೆ ತುಂಬಾ ಹಾಳಾಗಿದೆ. ಎರಡು ದಶಕಗಳಿಂದ ರಸ್ತೆಗಾಗಿ ಬೇಡಿಕೆ ಇಟ್ಟಿದರೂ ಇದುವರೆಗೆ ಅನುದಾನ ಕಲ್ಪಿಸಿಲ್ಲ ಎಂದು ಗ್ರಾಮದ ಪ್ರಮುಖರು ದೂರಿದರು.

**
ಕುಟುಂಬ ನಿರ್ವಹಣೆಗೆ ಭತ್ತ ಬೆಳೆಯಲೇ ಬೇಕು. ಮನೆಯವರೆ ಕಷ್ಟಪಟ್ಟು ಕೆಲಸ ಮಾಡಿ ಭತ್ತ ಬೆಳೆದಿದ್ದೇವೆ. ಈಗ ಕೊಯ್ಲು ಮಾಡಬೇಕು. ಮಳೆ ಸುರಿಯುತ್ತಿದೆ. ಪ್ರತಿದಿನ ಕಾಡುಕೋಣಗಳು ಫಸಲು ತಿನ್ನುತ್ತಿವೆ. ಏನೂ ಮಾಡುವುದೆಂದು ಗೊತ್ತಾಗುತ್ತಿಲ್ಲ. ಬೆಳೆ ಹಾನಿ ಪರಿಹಾರವೂ ಸಿಗುತ್ತಿಲ್ಲ. ರೈತರನ್ನು ಕೇಳುವವರೆ ಇಲ್ಲದಂತಾಗಿದೆ. ವೈ.ಎಸ್. ಕೃಷ್ಣಪ್ಪ, ಭತ್ತ ಕೃಷಿಕರು, ಯಡದಂಟೆ.

**
ಪ್ರತಿವರ್ಷ ಅಕಾಲಿಕ ಮಳೆಯಿಂದ ಶೇ.೫೦ ರಷ್ಟು ಫಸಲನ್ನು ಕಳೆದುಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಕಾಡುಹಂದಿಗಳು ಹಣ್ಣಾದ ಭತ್ತದ ಪೈರನ್ನು ತಿಂದು ತುಳಿದು ಹಾನಿ ಮಾಡಿವೆ. ಕಂದಾಯ ಇಲಾಖೆ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಯು.ಸಿ. ಧರ್ಮಪಾಲ, ಕೃಷಿಕರು, ಕೂತಿ.

**
ಭತ್ತ ಪೈರನ್ನು ಕೊಯ್ಲು ಮಾಡಲಾಗಿದೆ. ಈಗ ಅಕಾಲಿಕ ಮಳೆಯಿಂದ ಭತ್ತದ ಪೈರಿನ ಮೇಲೆ ನೀರು ನಿಂತಿದೆ. ಪೈರು ಕೊಳೆಯಲು ಪ್ರಾರಂಭ ವಾಗಿದೆ. ಭತ್ತ ಗದ್ದೆಯೊಳಗೆ ಮೊಳಕೆಯೊಡೆಯುವ ಆತಂಕ ಎದುರಾಗಿದೆ. ಪರಿಹಾರ ಸಿಗುವ ಆಸೆ ಬಿಟ್ಟಿದ್ದೇವೆ. ಕೆ.ಆರ್. ಗಣಪತಿ, ಹಿರಿಯ ಕೃಷಿಕರು, ಕೆರೆಕೊಪ್ಪ.

**
ಸೋಮವಾರಪೇಟೆ ತಾಲೂಕನ್ನು ಭತ್ತದ ಕಣಜ ಎಂದು ಕರೆಯಾಗುತ್ತಿತ್ತು. ಸರ್ಕಾರದ ಸೌಲಭ್ಯ ಸಿಗದರಿಂದ ಲಾಭದಾಯಕವಲ್ಲದ ಭತ್ತದ ಕೃಷಿಯನ್ನು ಹೆಚ್ಚಿನ ಕೃಷಿಕರು ಕೈಬಿಟ್ಟು, ಅಡಕೆ, ಕಾಫಿ, ಬಾಳೆ ಬೆಳೆಯುತ್ತಿದ್ದಾರೆ. ಭತ್ತ ಬೆಳೆಯುವವರಿಗೆ ಸರ್ಕಾರ ಎಕರೆಗೆ ವಾರ್ಷಿಕ ೨೦ ಸಾವಿರ ರೂಪಾಯಿ ಸಹಾಯಧನ ಕೊಟ್ಟು ಪ್ರೋತ್ಸಾಹಿಸಬೇಕು. ಆಸ್ತಿ ದಾಖಲಾತಿ ಇಲ್ಲದವರಿಗೂ ಸರ್ಕಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರಿಹಾರ ಕೊಡಬೇಕು. ಕೆ.ಎಂ. ದಿನೇಶ್, ತಾಲೂಕು ಅಧ್ಯಕ್ಷರು, ರೈತ ಸಂಘ.

**
ರೈತರೇ ಕಾಫಿ ಬೆಳೆಯುತ್ತಿದ್ದು, ಪ್ರಸಕ್ತ ವರ್ಷ ಕಾಫಿ, ಕಾಳುಮೆಣಸು, ಭತ್ತ ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡ ಬೇಕು. ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಕಾಫಿ ತೋಟಗಳು ಉಳಿಯಬೇಕಾದರೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಸಹಾಯಧನ ನೀಡಿ ರೈತರಿಗೆ ಪ್ರೋತ್ಸಾಹ ನೀಡಬೇಕು. ಎ.ಜೆ. ಕೃಷ್ಣಪ್ಪ, ಕೃಷಿಕರು, ದೊಡ್ಡತೋಳೂರು.