ಜಿಲ್ಲೆ

ಬೆಳೆ ಹಾನಿ ಪರಿಹಾರ ನೀಡಲು, ರೈತರ ಸಾಲ ಮನ್ನಾ ಪರಿಶೀಲನೆ : ಸಿಎಂ ಸಿದ್ಧರಾಮಯ್ಯ

ಬಾಬುರಾವ ಯಡ್ರಾಮಿ

ಕೇಂದ್ರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಕೆ : ಜಂಟಿ ಸಮೀಕ್ಷೆ ಶೀಘ್ರವಾಗಿ ಪೂರ್ಣ 

ಕಲಬುರಗಿ: ರಾಜ್ಯದಲ್ಲಿ ಅತಿವೃಷ್ಟಿ ಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ  ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ನಗರದಲ್ಲಿ ಕಲ್ಯಾಣ ಉತ್ಸವದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರ ಜತೆಗೆ ಮಾತನಾಡಿ, ರಾಜ್ಯದಲ್ಲಿ ಸರಾಸರಿಗಿಂತ ಶೇ.,10 ಕ್ಕೂ ಹೆಚ್ಚಿನ ಮಳೆಯಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ ಸೇರಿ ಇತರೆಡೆ ಅತಿ ಹಚ್ಚಿನ ಮಳೆಯಾಗಿ ಬೆಳೆಗಳೆಲ್ಲ ನೀರಲ್ಲಿ ನಿಂತು ಹಾನಿಯಾಗುತ್ತಿವೆ. ಸಮೀಕ್ಷೆ ಮಾಡದಿರುವ ಮಟ್ಟಿಗೆ ಹೊಲಗಳಲಿ ನೀರು ನಿಂತಿದೆ. ಜಂಟಿ ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ. ವರದಿ ಬಳಿಕ ಬೆಳೆ ಪರಿಹಾರ ಹಾಗೂ ಇನ್ನಿತರ ಕ್ರಮಕೈಗೊಳ್ಳಲಾಗುವುದು. ಸಾಲ ಮನ್ನಾ ಬಗ್ಗೆ ರೈತರಿಂದ ಮನವಿ ಕೇಳಿ ಬರುತ್ತಿದೆ. ಹೀಗಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿ ಯಿಂದ ಹಾನಿಯಾಗಿರುವ ಬೆಳೆಯನ್ನು ಸಮರ್ಪಕವಾಗಿ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರಕ್ಕೆ ಬೇಗ ವರದಿ: ಜಂಟಿ ಸಮೀಕ್ಷೆ ನಂತರ ರಾಜ್ಯದ ಅತಿವೃಷ್ಟಿ ಹಾನಿಯ ವರದಿಯನ್ನು ಕೇಂದ್ರಕ್ಕೆ ಆದಷ್ಟು ಬೇಗ ಸಲ್ಲಿಸಲಾಗುವುದು. ಕಳೆದ ವರ್ಷವೂ ಸಕಾಲಕ್ಕೆ ಅತಿವೃಷ್ಟಿ-ಅನಾವೃಷ್ಟಿಯಿಂದಾದ ಬೆಳೆ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿ ವರದಿ ಸಲ್ಲಿಸಲಾಗಿದ್ದರೂ ತಡವಾಗಿದೆ ಎಂದು ಪರಿಹಾರ ನೀಡಲೇ ಇಲ್ಲ. ಈ ವರ್ಷವೂ ಹಾಗೆ ಮಾಡದಿರಲಿ. ಅದಲ್ಲದೇ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರಿಕೋಟ್೯ಗೆ ಹೋಗಿದ್ದನ್ನು ಕೇಂದ್ರ ಸರ್ಕಾರ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ‌

ಸಿಐಡಿ ತನಿಖೆಗೆ: ಬ್ಯಾಂಕ್ ಗಳ ದರೋಡೆ ಸಂಬಂಧವಾಗಿ ಆರೋಪಿಗಳನ್ನು ಬೇಗ ಬಂಧಿಸಲಾಗುವುದು. ಅದಲ್ಲದೆ ಹತ್ತಿಕ್ಕಲು ಕಠಿಣ ಕ್ರಮಕ್ಕೆ ಮುಂದಾಗಲಾಗುವುದು. ಪ್ರಮುಖವಾಗಿ ಯಾದಗಿರಿ ಯಲ್ಲಿ ಅಕ್ಕಿ ಕಳ್ಳತನ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಸಿಐಡಿಗೆ ವಹಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಇದಕ್ಕೂ ಮುನ್ನಾ ಕಲ್ಯಾಣ ಉತ್ಸವದಲ್ಲಿ ಮಾತನಾಡಿದ ಸಿಎಂ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಖಾಲಿ ಹುದ್ದೆಗಳನ್ನು ಹಂತ- ಹಂತವಾಗಿ ನೇಮಕ ಮಾಡಲಾಗುವುದು ಎಂದು ಹೇಳಿದರು.

ಒಳಮೀಸಲಾತಿ ಗೊಂದಲ ಹಿನ್ನೆಲೆಯಲ್ಲಿ ಇಷ್ಟು ದಿನ ಹುದ್ದೆಗಳ ನೇಮಕಕ್ಕೆ ಅಡಚಣೆ ಎದುರಾಗಿತ್ತು. ಆದರೆ ಈಗ ಬಗೆಹರಿದಿದ್ದರಿಂದ ಈಗ ನೇಮಕ ಕ್ಕೆ ಮುಂದಾಗಲಾಗುವುದು ಎಂದರು.

ವಾರದೊಳಗೆ ಹುದ್ದೆಗಳ ಸಮೇತ ಅಧಿಸೂಚನೆ: ಕಲ್ಯಾಣಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸೋಮವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ವಾರದೊಳಗೆ ಹುದ್ದೆಗಳ ಸಮೇತ ಅಧಿಸೂಚನೆ ಹೊರಡಿಸಲಾಗುವುದು. ಇದೇ ಭಾಗದವರಿಗೆ ಕಾರ್ಯಭಾರ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಯಚೂರಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರಕ್ಕೆ ರಾಜ್ಯಸರ್ಕಾರ ಪತ್ರ ಬರೆದಿದೆ. ಹೀಗಾಗಿ ಕೇಂದ್ರ ಸರ್ಕಾರ ತನ್ನ ವಿಳಂಬ ನೀತಿ ತೋರದೇ ಏಮ್ಸ್ ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.