ಮಡಿಕೇರಿ: ದೈವ ಆರಾಧಕರು ಹಿಂದೂಗಳಲ್ಲ, ದೈವಾರಾಧನೆ ಹಿಂದೂ ಸಂಪನ್ಮೂಲದ ಭಾಗವಲ್ಲ ಎಂಬ ನಟ ಚೇತನ್ ಹೇಳಿಕೆ ಖಂಡನೀಯ ಎಂದು ತುಳು ಭಾಷಾ ಸಂಘಟಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬುದ್ಧಿ ಇಲ್ಲದ ಬುದ್ಧಿಜೀವಿಯಂತೆ, ವಿಚಾರವಿಲ್ಲದ ವಿಚಾರವಾದಿಯಂತೆ ಹೇಳಿಕೆ ನೀಡಿರುವ ಚೇತನ್, ಶತಶತಮಾನಗಳಿಂದ ದೈವವನ್ನು ನಂಬಿಕೊಂಡು ಬಂದಿರುವ ಹಲವು ಜಾತಿ, ಪಂಗಡಗಳಿಗೆ ನೋವುಂಟುಮಾಡಿದ್ದಾರೆ. ಶೋಷಿತ ಸಮುದಾಯವನ್ನು ಸಮಾಜದಿಂದ ಬೇರೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಯ ಪರವ, ಪಂಬದ ನಲಿಕೆ, ಮುಗೇರರು ಸೇರಿದಂತೆ ವಿವಿಧ ಜಾತಿ ಪಂಗಡಗಳ ಮಂದಿ ಸಾವಿರಾರು ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿದ್ದಾರೆ. ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಆಚಾರ, ವಿಚಾರಗಳನ್ನು ಹಿಂದೂ ಧರ್ಮದನ್ವಯ ನಡೆಸಿಕೊಂಡು ಬರುತ್ತಿದ್ದಾರೆ. ದೈವಾರಾಧನೆಯಲ್ಲಿ ಬರುವ ಪಾಡ್ದಾನದಲ್ಲಿ ಪುರಾಣ ಕಥೆಗಳಿಗೆ ಸಂಬಂಧ ಕಲ್ಪಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ, ದೈವದಕೋಲದಲ್ಲಿ ಪಾಡ್ದಾನ ಅತಿ ಪ್ರಮುಖ ಅಂಶವಾಗಿದೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಚೇತನ್ ಅವರು ದೈವರಾಧನೆ ಹಿಂದೂ ಸಂಸ್ಕೃತಿ ಅಲ್ಲವೆಂದು ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಾಡಿನ ದೈವ ಸಂಸ್ಕೃತಿಯ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನೈಜತೆಯ ಅರಿವಿದೆ. ಈ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿಯ ಅರಿವಿಲ್ಲದವರು ನೀಡುವ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಲಕ್ಷಾಂತರ ದೈವಾರಾಧಕರ ಮನಸ್ಸಿಗೆ ನೋವುಂಟು ಮಾಡಿರುವ ಚೇತನ್ ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ರವಿ ಒತ್ತಾಯಿಸಿದ್ದಾರೆ.