ಬೆಂಗಳೂರು; ರಾಮನಗರದ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತೋಟಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭೇಟಿ ನೀಡಿದ್ದರು.
ಈ ಸಂತಸದ ಕ್ಷಣಗಳನ್ನು ಹಂಚಿಕೊಂಡಿರುವ ಕುಮಾರಸ್ವಾಮಿ, ನಾನು ಅತೀವ ಪ್ರೀತಿ, ಮಮತೆಯಿಂದ ಸೃಷ್ಟಿ ಮಾಡಿಕೊಂಡಿರುವ ’ಕೃಷಿ ಭೂಮಿ’ಗೆ ನಾಡಿನ ಮಣ್ಣಿನ ಮಗ, ರೈತ ನಾಯಕ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಗಮಿಸಿದ್ದರು. ಹಸಿರಿನಿಂದ ಕಂಗೊಳಿಸುತ್ತಿರುವ ನನ್ನ ತೋಟವನ್ನು ಕಂಡು ದೇವೇಗೌಡರು ಅಷ್ಟೇ ಸಂಭ್ರಮ ಪಟ್ಟರು ಎಂದು ಖುಷಿ ಹಂಚಿಕೊಂಡಿದ್ದಾರೆ.
ದೇವೇಗೌಡರು, ತಾಯಿ ಚನ್ನಮ್ಮರಿಗೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ದಂಪತಿ ಈ ಶುಭ ದಿನ ನನ್ನ ಪ್ರೀತಿಯ ತೋಟಕ್ಕೆ ಆಗಮಿಸಿದ್ದು, ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟಿದ್ದು ಅವರ ಮಗನಾದ ನನ್ನನ್ನು ಭಾವಪರವಶನಾಗುವಂತೆ ಮಾಡಿತು. ಈ ಅಪರೂಪದ ಸನ್ನಿವೇಶ ಸೃಷ್ಟಿಸಿದ ದೇವರಿಗೆ ನನ್ನ ನಮನಗಳು. ದೇವೇಗೌಡ ದಂಪತಿಗೆ ಶುಭಾಶಯಗಳು ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.