ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ಶೇ.50:50 ರ ಅನುಪಾತ ನಿವೇಶನ ಹಗರಣದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ಭಾಗಿಯಾಗಿದ್ದಾರೆ ಎಂದು ವಕೀಲ ರವಿಕುಮಾರ್ ಆರೋಪಿಸಿದ್ದಾರೆ.
ಭೂ ಮಾಲೀಕರಿಂದ ಜಿಪಿಎ ಪಡೆದು ಅದನ್ನೇ ಬಳಸಿಕೊಂಡು ಶೇ.50ರ ಅನುಪಾತದಲ್ಲಿ ಮೂರು ನಿವೇಶನ ಪಡೆದಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಡಾ ವಿರುದ್ಧ ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿಯೂ ಭಾಗವಹಿಸಿದ್ದ ರಮೇಶ್, ದೊಡ್ಡ ನಾಯಕರ ಜತೆ ಬೆಂಗಳೂರಿನಿಂದ ಮೈಸೂರಿಗೆ ಹೆಜ್ಜೆ ಹಾಕಿದ್ದರು. ಮುಡಾದ ಅಕ್ರಮ ಕುರಿತು ತನಿಖೆ ನಡೆಸಿ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ನಾಟಕವಾಡಿದ್ದಾರೆ ಎಂದು ಆರೋಪಿಸಿದರು.
ಬಸವನಹಳ್ಳಿ ಗ್ರಾಮದ ಸರ್ವೇ ನಂಬರ್ 126/2 ಎ ರ ಭೂ ಮಾಲೀಕರಾದ ಹೊನ್ನೇಗೌಡ ಉರುಫ್ ಅಮಾಸೇಗೌಡ ಅವರ ಜಮೀನನ್ನು ಜಿಪಿಎ ಪಡೆದ್ದರು. ಆದರೆ ತಾವೇ ಭೂ ಮಾಲೀಕ ಎಂದು ಪರ್ಯಾಯವಾಗಿ ಮೂರು ನಿವೇಶನ ಕಬಳಿಸಿದ್ದಾರೆ ಎಂದು ಕಿಡಿಕಾರಿದರು.
ರೈತರ ಹಿತ ಕಾಯುವ ಪಕ್ಷದ ನೇತಾರರೆಂಬ ಪಕ್ಷದ ಜನಪ್ರತಿನಿಧಿಯಾಗಿದ್ದ ಅವರು ರೈತನಿಗೆ ಸೇರಬೇಕಾದ ನಿವೇಶನ ಸಲ್ಲುವಂತೆ ಮಾಡುವ ಬದಲು ಆತನ ಮುಗ್ಧತೆ ಬಳಸಿಕೊಂಡು ತಾವೇ ಕಬಳಿಸಿದ್ದಾರೆ ಎಂದು ದೂರಿದರು.
ಕೂಡಲೇ ರೈತನಿಗೆ ಅವನ್ನು ವಾಪಸು ನೀಡಬೇಕು. ಇಲ್ಲದಿದ್ದರೆ ಸಂತ್ರಸ್ತ ರೈತ ಹಾಗೂ ಇನ್ನಿತರರೊಡಗೂಡಿ ರಮೇಶ್ ಅವರ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೈಸೂರು ತಾಲೂಕಿನ ಹೆಬ್ಬಾಳು ಗ್ರಾಮದ ಸರ್ವೇ ನಂಬರ್ 272/4 ರಲ್ಲಿ 16 ಗುಂಟೆ ಜಮೀನನ್ನು ಪ್ರಾಧಿಕಾರ ಭೂ ಸ್ವಾಧೀನ ಪಡಿಸಿಕೊಳ್ಳದೆ, ರಸ್ತೆ ನಿರ್ಮಾಣ ಮಾಡಿದೆ. ಆದರೆ ಬದಲಿ ಜಾಗದ ವಿಷಯ ಮಂಡಿಸಿ, ಬೇರೊಂದು ಸರ್ವೇ ನಂಬರ್‌ನಲ್ಲಿನ 11.1/2 ಎಕರೆ ಜಮೀನಿಗೆ ನಾರಾಯಣ ಎಂಬಾತನಿಗೆ 30,840 ಅಳತೆಯ ಕೋಟ್ಯಂತರ ಬೆಲೆ ಬಾಳುವ ಮೂರು ನಿವೇಶನಗಳನ್ನು ಡಿ.ಬಿ.ನಟೇಶ್ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಮುಡಾ ನಿವೃತ್ತ ಅಧಿಕಾರಿ ನಟರಾಜ್, ಮುಖಂಡರಾದ ಆದಶ್, ಗುರು ಇದ್ದರು.