ಜಿಲ್ಲೆ

ಆನ್‌ಲೈನ್ ದಂಧೆಗೆ ಕಡಿವಾಣಕ್ಕೆ ನಗರಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ಆಗ್ರಹ

ಮೈಸೂರು: ಇತ್ತೀಚಿನ ದಿನಗಳಲ್ಲಿ ಯುವಜನರು ಸೇರಿದಂತೆ ಜನಸಾಮಾನ್ಯರು, ಮಕ್ಕಳು, ಯುವತಿಯರು ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು, ಅಪಾರ ಪ್ರಮಾಣದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಚಟಕ್ಕೆ ಬಿದ್ದು, ಬಹಳಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದೂ ಉಂಟು. ಹೀಗಾಗಿ, ಸರ್ಕಾರ ಕೂಡಲೇ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಮುಖ್ಯವಾಗಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಖ್ಯಾತ ನಟ, ನಟಿಯರು ಇದಕ್ಕೆ ಪ್ರಚಾರ ನೀಡುವುದು ಪ್ರಮುಖ ಕಾರಣವಾಗಿದೆ. ಜಾಹೀರಾತುಗಳು ಸಹ ಬೆಟ್ಟಿಂಗ್‌ಗೆ ಪ್ರೇರೇಪಿಸುತ್ತಿವೆ ಎಂದು ದೂರಿದರು.

ಇದಲ್ಲದೆ ಹಲವಾರು ಕ್ಯಾಸಿನೋಗಳು ಆಟ ಆಡಲು ಪ್ರಚೋದನೆ ನೀಡುವವರಿಗೆ ಶೇ.30ರಷ್ಟು ಕಮಿಷನ್ ಆಮಿಷವೊಡ್ಡುತ್ತಿವೆ. ಹೀಗಾಗಿ, ಸುಲಭವಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸರ್ಕಾರ ಈ ಆ್ಯಪ್‌ಗಳು ಓಪನ್ ಆಗದಂತೆ ಕ್ರಮ ವಹಿಸಬೇಕು. ಬೆಟ್ಟಿಂಗ್ ದಂಧೆಗೆ ಪ್ರಚೋದನೆ ನೀಡುವವರಿಗೂ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಪ್ರಕಾಶ್ ಎಸ್.ಪ್ರಿಯದರ್ಶನ್, ದಿನೇಶ್‌ಗೌಡ, ನರಸಿಂಹೇಗೌಡ, ರಾಮಕೃಷ್ಣೇಗೌಡ ಇದ್ದರು.