ಜಿಲ್ಲೆ

ಏ.18ರಂದು ಗೌರವ ಸಮರ್ಪಣಾ ಸಮಾರಂಭ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಾಗರಿಕ ಸಮಿತಿಯ ವತಿಯಿಂದ ವಿಶ್ವ ಒಕ್ಕಲಿಗ ಮಠದ ಉತ್ತರಾಧಿಕಾರಿ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಗೌರವ ಸಮರ್ಪಣಾ ಸಮಾರಂಭ ಕಾರ್ಯಕ್ರಮವನ್ನು ಏ.18ರಂದು ಬೆಳಗ್ಗೆ 11ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

ನಿಶ್ಚಲಾನಂದನಾಥ ಸ್ವಾಮೀಜಿ ಅವರು ಪೂರ್ವಾಶ್ರಮದಲ್ಲಿ ಡಾ.ಎಚ್.ಎಲ್.ನಾಗರಾಜು ತಹಸೀಲ್ದಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ 18 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ 10 ವರ್ಷದ ಸೇವಾವಧಿ ಇರುವಾಗಲೇ ಅಚಲ ನಿರ್ಧಾರ ಕೈಗೊಂಡಿರುವುದಕ್ಕೆ ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಕೊಮ್ಮೇರಹಳ್ಳಿ ಶಾಖೆಯ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಉದ್ಯಮಿ ಕೆ.ಎಚ್.ವೆಂಕಟರಮಣೇಗೌಡ ಅವರು ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಗೌರವಿಸುವರು. ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಜಯರಾಂ ರಾಯಪುರ ಅಭಿನಂದನಾ ನುಡಿಗಳನ್ನಾಡುವರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಎಂ.ಶಿವಮೂರ್ತಿ, ಕೆ.ಆರ್.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಬಿಜಿಎಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಆದರ್ಶ್ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಬಿ.ಜಯಪ್ರಕಾಶಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಎಸ್.ನಾರಾಯಣ್, ಕಾರಸವಾಡಿ ಮಹದೇವ, ಲೋಕೇಶ್ ಚಂದಗಾಲು ಇದ್ದರು.