ಮಂಡ್ಯ: ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ಅಥವಾ ಹಸ್ತಾಂತರ ಮಾಡುವ ಅಧಿಕಾರ ಕಾರ್ಖಾನೆ ಅಧ್ಯಕ್ಷರಿಗಿಲ್ಲ. ಒಂದು ವೇಳೆ ಶಾಲೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಸಿ.ಡಿ.ಗಂಗಾಧರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದರು.
ಕಾರ್ಖಾನೆಗೆ ಒಪ್ಪಿಗೆಯಾದ ಕಬ್ಬನ್ನು ಪಡೆದು ನುರಿಸುವುದಷ್ಟೇ ಅಧ್ಯಕ್ಷರ ಕೆಲಸ. ಅದನ್ನು ಬಿಟ್ಟು ಶಾಲೆಯನ್ನು ಖಾಸಗೀಕರಣಗೊಳಿಸುವ ಅಧಿಕಾರ ಮೈಶುಗರ್ ಅಧ್ಯಕ್ಷರಿಗಿಲ್ಲ. 1949ರಲ್ಲಿ ಆರಂಭಗೊಂಡ ಮೈಶುಗರ್ ಪ್ರೌಢಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಶಾಲೆಗೆ ನಾಲ್ವರು ಹೆಚ್ಚುವರಿ ಶಿಕ್ಷಕರನ್ನು ಶೀಘ್ರದಲ್ಲಿಯೇ ನಿಯೋಜಿಸಲಿದೆ. ಇವರಿಗೆ ಸರ್ಕಾರವೇ ವೇತನ ನೀಡಲಿದ್ದು, ಖಾಸಗಿಯವರಿಗೆ ವಹಿಸುವ ಅಗತ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಧ್ಯಕ್ಷರು ಸರಬರಾಜು ಮಾಡುವ ಹಾಗೂ ಕಾರ್ಖಾನೆಯಿಂದ ನುರಿಯಲಾಗುವ ಕಬ್ಬಿಗೆ ರೈತರಿಂದ 4 ರೂ ಹಾಗೂ ಕಾರ್ಖಾನೆಯಿಂದ 4 ರೂ ಒಟ್ಟು 8 ರೂಗಳನ್ನು ಶಾಲೆಗೆ ನೀಡಬೇಕು. ಆದರೆ ಶಾಲೆಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಸಲುವಾಗಿ ಈಗಾಗಲೇ ಆಡಳಿತ ಮಂಡಳಿಯ ಮೂರು ಸಭೆಗಳನ್ನು ಮಾಡಿದ್ದು, ಶಾಲೆ ಪರಭಾರೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಸರಿಯಾಗಿ ಕಬ್ಬು ನುರಿಯಲಾಗಿಲ್ಲವೆಂದು ಕಂಪನಿಯಿಂದ ಶಾಲೆಗೆ ನೀಡಬೇಕಾದ ಹಣ ನೀಡದ ಇವರು, ಶಾಲೆಯ 14 ಎಕರೆ ಆಸ್ತಿಯಲ್ಲಿ ಕ್ರಿಕೆಟ್ ಅಕಾಡೆಮಿಗೆ ವರ್ಷಕ್ಕೆ 50 ಸಾವಿರ ರೂ ಪಡೆದು ಸ್ಥಳ ನೀಡುವ ಮೂಲಕ ಕಿಕ್‌ಬ್ಯಾಕ್ ಪಡೆಯುತ್ತಿದ್ದಾರೆ. ಇದೀಗ ಶಾಲೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಿ ಎಷ್ಟು ಹಣ ಕಿಕ್‌ಬ್ಯಾಕ್ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಕ್ಕರೆ ಕಾರ್ಖಾನೆ ವಿಷಯವಾಗಿ ಹಿಂದೆ ಖಾಸಗಿಯವರಿಗೆ ನೀಡಿದರೆ ಖಾಸಗೀಕರಣ ಮಾಡಿದಂತಾಗುತ್ತದೆ ಎಂದಿದ್ದರು. ಇದೀಗ ಅಧ್ಯಕ್ಷ ಶಾಲೆಯನ್ನು ಖಾಸಗಿಯವರಿಗೆ ಪರಭಾರೆ ಮಾಡುತ್ತಿರುವುದನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದರು.
ಶಾಲೆಯ ಶ್ರಯೋಭಿವೃದ್ಧಿ ಹಿರಿಯ ವಿದ್ಯಾರ್ಥಿಗಳ ಸಂಘ ಕಾರ್ಯದರ್ಶಿ ಸತ್ಯನಾರಾಯಣಮೂರ್ತಿ, ಸಿಐಟಿಯು ಸಿ.ಕುಮಾರಿ, ಕನ್ನಡಸೇನೆಯ ಮಂಜುನಾಥ್, ಗಿರೀಶ್, ತುಳಸೀಧರ್, ವೇಣುಗೋಪಾಲ್ ಇತರರಿದ್ದರು.