ಮೈಸೂರು: ರಾಜ್ಯ ಸರ್ಕಾರಿ ನೌಕರರಿಗಾಗಿ ಏಳನೇ ವೇತನ ಆಯೋಗದ ಶಿಫಾರಸ್ಸನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎಚ್ಚರಿಸಿದರು.
ಕೇಂದ್ರ ಸರ್ಕಾರಿ ನೌಕರರ ವೇತನಕ್ಕೂ ರಾಜ್ಯ ಸರ್ಕಾರಿ ನೌಕರರ ವೇತನಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಈ ತಾರತಮ್ಯ ಹೋಗಲಾಡಿಸಬೇಕು. ರಾಜ್ಯದಲ್ಲಿ ಹೊಸ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದ್ದು, ಇದನ್ನು ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಚುನಾವಣೆಗೂ ಮೊದಲು ಕಾಂಗ್ರೆಸ್ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಾಗ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ 1995ರವರೆಗಿನ ಅನುದಾನ ನೀಡುವ ಆದೇಶ ಮಾತ್ರ ಜಾರಿಯಲ್ಲಿತ್ತು. ನಂತರ ಅದನ್ನು ವಿಸ್ತರಿಸುವ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ 1995ರಿಂದ ಕನಿಷ್ಠ 10 ವರ್ಷಗಳ ಕಾಲ 2005 ಅಥವಾ 2010 ರವರೆಗಿನ ಅನುದಾನವನ್ನು ಖಾಸಗಿ ಶಾಲಾ ಕಾಲೇಜುಗಳಿಗೆ ನೀಡುವ ಪ್ರಯತ್ನ ಸರ್ಕಾರ ಮಾಡಬೇಕು. ಈ ಮೂಲಕ ಖಾಸಗಿ ಶಾಲಾ ಕಾಲೇಜುಗಳಲ್ಲಿನ ನೌಕರರ ಜೀವನ ಭದ್ರತೆಗೆ ನಾಂದಿ ಹಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಉಮೇಶ್, ಲೋಕೇಶ್, ಎಂ.ಎಂ. ಮಹದೇವ್ ಇದ್ದರು.