ಮಂಡ್ಯ: ಜಿಲ್ಲೆಯ ರೈತರನ್ನು ನಿರ್ಲಕ್ಷಿೃಸಿ ತಮಿಳುನಾಡಿಗೆ ನೀರನ್ನು ಹರಿಸಿದ್ದಕ್ಕೆ ರಾಜ್ಯ ಸರ್ಕಾರ ಈಗಾಗಲೇ ದೊಡ್ಡ ಬೆಲೆ ತೆತ್ತಿದೆ. ಮತ್ತೆ ತಾತ್ಸಾರ ಮುಂದುವರಿದರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎಚ್ಚರಿಕೆ ನೀಡಿದರು.
ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ಆಯೋಜಿಸಿದ್ದ 20ನೇ ಸೋಮವಾರದ ಕಾವೇರಿ ಚಳವಳಿಯಲ್ಲಿ ಮಾತನಾಡಿದ ಅವರು, ಇಷ್ಟು ದಪ್ಪ ಚರ್ಮದ ಸರ್ಕಾರವನ್ನು ನಾವೆಲ್ಲಿಯೂ ನೋಡಿಲ್ಲ. ಕಾವೇರಿ ಮತ್ತು ಚಳವಳಿ ವಿಚಾರದಲ್ಲಿ ಒಂದು ರೀತಿಯ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ. ರೈತರಿಗೆ ಈ ಬಾರಿಯು ಬೆಳೆ ಬೆಳೆಯಲು ನೀರು ಬಿಡದೇ ಹೋದರೆ, ನಮ್ಮ ಮುಂದೆ ದೊಡ್ಡ ಹೋರಾಟದ ಸವಾಲು ಕೂಡ ಎದುರಾಗುತ್ತದೆ, ಅದನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ನೀರನ್ನು ನಾವು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡೋಣ, ಇದರಿಂದ ರೈತರನ್ನು ಉಳಿಸಿಕೊಳ್ಳೋಣೆ ಎಂದು ಕರೆ ನೀಡಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಸಮಸ್ಯೆಯ ಕುರಿತು ಎಂಟು ಜಿಲ್ಲೆಯ ಸಂಸದರನ್ನು ಒಳಗೊಂಡಂತೆ ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಕಾವೇರಿ ಕೊಳ್ಳದ ರೈತರ ಸಂಕಷ್ಟವನ್ನು ಹಾಗೂ ನೀರಿನ ಬೆಡಿಕೆಯನ್ನು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ನಾರಾಯಣ್, ಮಂಜುನಾಥ್, ಮುದ್ದೇಗೌಡ, ತುಳಸೀಧರ್, ಫಯಾಜ್, ಶಂಕರೇಗೌಡ, ಬಸವರಾಜ್ ಇದ್ದರು.