ಜಿಲ್ಲೆ

ಮಾಜಿ ಶಾಸಕ ವಾಸು ನಿಧನ

ಸದೇಶ್ ಕಾರ್ಮಾಡ್

ಮೈಸೂರು: ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಾಸು ಶನಿವಾರ ನಿಧನರಾದರು.

ಮೃತರಿಗೆ ಮಕ್ಕಳಾದ ಕವೀಶ್, ಅವೀಶ್ ಹಾಗೂ ರಿತೇಷ್ ಇದ್ದಾರೆ. ಇವರ ಪತ್ನಿ ಲಲಿತಾ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ವಾಸು ಅವರು ಬಹುಅಂಗಾಂಗ ವೈಫಲ್ಯದಿಂದ ಕಳೆದ ಕೆಲವು ತಿಂಗಳಿನಿಂದ ಅವರು ಬಳಲುತ್ತಿದ್ದರು. ಗಾಯತ್ರಿಪುರಂ ವಾರ್ಡ್ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡು ನಂತರ ಮೇಯರ್ ಆಗಿ ಆಯ್ಕೆಗೊಂಡ ವಾಸು ಅವರು ವೀರಪ್ಪಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಚಾಮರಾಜ ಕ್ಷೇತ್ರದಲ್ಲಿ 4 ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಸೋಲು ಕಂಡು, 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಶಂಕರಲಿಂಗೇಗೌಡ ವಿರುದ್ಧ 2 ಬಾರಿ, ಬಿಜೆಪಿಯ ಎಲ್. ನಾಗೇಂದ್ರ ವಿರುದ್ದ ಒಂದು ಬಾರಿ ಸೋಲು ಕಂಡಿದ್ದರು.

ಕರ್ನಾಟಕ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ವಿವಿಧ ಸಹಕಾರ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ದುಡಿದಿದ್ದಾರೆ.