ಜಿಲ್ಲೆ

ಸಂಪೂರ್ಣ ಹದಗೆಟ್ಟ ಮಳವಳ್ಳಿ ತಾಲೂಕು ಆಡಳಿತ: ಮಾಜಿ ಶಾಸಕ ಕೆ.ಅನ್ನದಾನಿ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಳವಳ್ಳಿ ತಾಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿಯಲ್ಲಿ ಭಾರಿ ಹಿನ್ನಡೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ನಾಲ್ಕು ಕೊಲೆಗಳು ನಡೆದಿರುವುದೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆರೋಪಿಸಿದರು.

ಶಾಸಕರು ತಾಲೂಕು ಆಡಳಿತದ ಬಗ್ಗೆ ಗಮನಹರಿಸದೆ ಪರಿಸರ ಮಾಲಿನ್ಯ ಮಂಡಳಿಯ ಕಡೆ ಗಮನಹರಿಸಿರುವುದು ಆಡಳಿತ ಹದಗೆಡಲು ಕಾರಣವಾಗಿದೆ ಮತ್ತು ಜನರ ಸಮಸ್ಯೆಗಳನ್ನು ಕೇಳುವವರಿಲ್ಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಸಮಾಜ ಕಲ್ಯಾಣ ಇಲಾಖೆ ನಡೆಸುವ ಶಾಲೆಗಳಿಂದ ಗೋಧಿ, ಆಹಾರ ಧಾನ್ಯಗಳನ್ನು ಕದ್ದು ಮಾರಾಟ ಮಾಡಲಾಗುತ್ತಿದೆ. ಶಾಸಕರ ಆಡಳಿತ ಧಕ್ಷವಾಗಿದ್ದರೆ ಇಂತಹ ಅವ್ಯವಹಾರಗಳು ನಡೆಯುತ್ತಿರಲಿಲ್ಲ. ಶಾಸಕರೇ ಇದಕ್ಕೆಲ್ಲ ಮುಖ್ಯ ಕಾರಣವಾಗಿದ್ದು, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮೇಲೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅನ್ಯಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದರ ಜತೆಗೆ ಆಹಾರ ಧಾನ್ಯ ಕಳ್ಳತನವಾಗುತ್ತಿದೆ. ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ನಾನು ಮಳವಳ್ಳಿ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು, ಶಂಕುಸ್ಥಾಪನೆಗಳು ಸಹ ನೆರವೇರಿದ್ದವು. ಆದರೆ, ಪ್ರಸ್ತುತ ಶಾಸಕರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದು, ನನ್ನ ಕಾಲದ ಅಭಿವೃದ್ಧಿಗೆ ಸಂಬಂಧಿಸಿದ ಶಂಕುಸ್ಥಾಪನೆ ಕಲ್ಲುಗಳನ್ನು ಕಿತ್ತೆಸೆಯುತ್ತಿದ್ದು, ಆರು ತಿಂಗಳಿನಿಂದ ಇಂತಹ ಕೆಲಸಗಳು ತಾಲೂಕಿನಲ್ಲಿ ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ಸಹ ಪತ್ರ ಬರೆದಿದ್ದರೂ ಏನೂ ಪ್ರಯೋಜನವಾಗಿಲ್ಲ. ದಿಶಾ ಸಭೆಯಲ್ಲೂ ಗಮನಕ್ಕೆ ತಂದಾಗ ಮತ್ತೆ ಅಳವಡಿಸಲಾಗುವುದು ಎಂದು ಹೇಳಿದ್ದರು. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ದ್ವೇಷ ರಾಜಕಾರಣ ಮಾಡಲಾಗುತ್ತಿದ್ದು, ನಮಗೂ ಬರುತ್ತದೆ. ನಾವೂ ಬಲಿಷ್ಠರಾಗಿದ್ದೇವೆ. ಜಾ.ದಳದವರೇನು ಶಕ್ತಿಹೀನರಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್ಸಿ/ಎಸ್ಟಿ ಜಾ.ದಳ ಘಟಕದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ, ಮಳವಳ್ಳಿ ತಾಲೂಕು ಅಧ್ಯಕ್ಷ ಕಾಂತರಾಜು ಹಾಜರಿದ್ದರು.