ಜಿಲ್ಲೆ

ಮಾತೃ ಪಕ್ಷ ಜೆಡಿಎಸ್‌ಗೆ ಮರಳಿದ ಎಚ್.ನಿಂಗಪ್ಪ

ತುಮಕೂರು: ಕಾಂಗ್ರೆಸ್ ತೊರೆದು ಮಾಜಿ ಶಾಸಕ ಎಚ್.ನಿಂಗಪ್ಪ ಮಾತೃ ಪಕ್ಷ ಜೆಡಿಎಸ್‌ಗೆ ಮರಳಿದರು. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಶಕ್ತಿ ಇನ್ನಷ್ಟು ವೃದ್ಧಿ ಆಗಲಿದೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್.ನಿಂಗಪ್ಪಗೆ ಪಕ್ಷದ ಬಾವುಟ ನೀಡಿ ಆತ್ಮೀಯವಾಗಿ ಬರಮಾಡಿಕೊಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೇ ಅಲ್ಲದೇ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ಹೊರುವಂತೆ ಕರೆಕೊಟ್ಟರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಸಿ.ಗೌರಿಶಂಕರ್ ಜೆಡಿಎಸ್ ತೊರೆದ ಕೈ ಸೇರ್ಪಡೆ ಬಳಿಕ ನಾವಿಕನಿಲ್ಲದ ದೋಣಿಯಂತಾಗಿದ್ದ ಪಕ್ಷಕ್ಕೆ ನಿಂಗಪ್ಪ ಸೇರ್ಪಡೆಯಿಂದ ಕಳಾಹೀನರಾಗಿದ್ದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಚೈತನ್ಯ ಬಂದಂತಾಗಿದೆ. ಪಕ್ಷ ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, ಯಾವುದೇ ಷರತ್ತುಗಳಿಲ್ಲದೆ ನಿಂಗಪ್ಪ ಪಕ್ಷಕ್ಕೆ ಮರುಸೇರ್ಪಡೆ ಆಗುತ್ತಿದ್ದು ಅವರು ನಮ್ಮಿಂದ ಪ್ರೀತಿ, ವಿಶ್ವಾಸ, ಗೌರವವನ್ನಷ್ಟೇ ಬಯಸಿದ್ದಾರೆ ಎಂದರು.

ಗೌರಿಶಂಕರ್‌ಗೆ ಕೃತ್ಯಜ್ಞತೆ ಇಲ್ಲ: ಸಹಾಯ ಮಾಡಿದವರನ್ನು ನೆನೆಯುವ ಸಣ್ಣ ಕೃತಜ್ಞತೆ ಇಲ್ಲದವನು ಗೌರಿಶಂಕರ್. 2023, 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲು ನಿಂಗಪ್ಪ ಮಾರ್ಗದರ್ಶನದಲ್ಲೇ ಚುನಾವಣೆ ಎದುರಿಸುವಂತೆ ಗೌರಿಶಂಕರ್‌ಗೆ ಹೇಳಿದ್ದೆ. ಆತ 2023ರಲ್ಲಿ ನಿಂಗಪ್ಪರನ್ನು ದೂರ ಮಾಡಿದ ಪರಿಣಾಮ ಅತ್ಯಲ್ಪ ಮತದಿಂದ ಸೋಲುವಂತಾಯಿತು ಎಂದು ಕುಮಾರಸ್ವಾಮಿ ಬೇಸರಿಸಿದರು.

ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆ ಸಂದರ್ಭದಲ್ಲಿ ನಿಂಗಪ್ಪ ಅವರನ್ನು ಕಣಕ್ಕಿಳಿಸಬೇಕೆಂಬುದು ನನ್ನಾಸೆ ಆಗಿತ್ತು. ಎಲ್ಲರಿಗೂ ಗಿಣಿಗೆ ಹೇಳಿದಂಗೆ ಹೇಳಿದ್ದೆ. ಆದರೆ, ಗೌರಿಶಂಕರ್ ಸೇರಿ ಎಲ್ಲರೂ ನಿಂಗಪ್ಪ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು. ಅವನ್ಯಾವನೋ ಬಂದ ಟೋಪಿ ಹಾಕಿದ ಹೋದ. ನಿಂಗಪ್ಪಗೆ ಒಳ್ಳೆಯ ಅವಕಾಶ ಕೈತಪ್ಪಿತು ಎಂದರು.

ಇಂತಹ ಕಷ್ಟ ಕಾಲದಲ್ಲಿ ನಿಂಗಪ್ಪ ಪಕ್ಷಕ್ಕೆ ಮರಳಿದ್ದಾರೆ. ಅವರಿಗೆ ಕೊಡಲು ನನ್ನ ಬಳಿ ಏನೂ ಇಲ್ಲ. ಯಾವುದೇ ಷರತ್ತು ವಿಧಿಸಿದೆ ಮನೆಗೆ ಮರಳಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಶಕ್ತಿ ಬಂದಂತಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ನಿಂಗಪ್ಪ ಅವರ ನೇತೃತ್ವದಲ್ಲಿ ಸಮಾವೇಶ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಡಲಾಗುವುದು. ನಾನೇ ಖುದ್ದು ಈ ಸಮಾವೇಶದಲ್ಲಿ ಭಾಗಿಯಾಗುವೆ ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮತ್ತಿತರರು ಮುಖಂಡಂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆಜೆಪಿ, ಕಾಂಗ್ರೆಸ್ ಸುತ್ತಾಡಿದ್ದ ನಿಂಗಪ್ಪ

2004ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ನಿಂಗಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ವಿರುದ್ಧ ಗೆದ್ದುಬೀಗಿದ್ದರು. ನಿಂಗಪ್ಪ ಜಿಲ್ಲಾಧ್ಯಕ್ಷರಾಗಿದ್ದ ಪಕ್ಷವು 9 ಸ್ಥಾನಗಳನ್ನು ಗೆದ್ದು ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಿತ್ತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಹೆಬ್ಬೂರು ಹೋಬಳಿ ಗ್ರಾಮಾಂತರ ಕ್ಷೇತ್ರಕ್ಕೆ ಸೇರ್ಪಡೆಯಾದಾಗ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಪಡೆದ ನಿಂಗಪ್ಪ ಬಿಜೆಪಿ ಸುರೇಶಗೌಡ ಮುಂದೆ ಶರಣಾದರು. ನಂತರ ಕೆಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಸುತ್ತಾಟ ನಡೆಸಿದ್ದ ಅವರು ಈಗ ಮಾತೃ ಪಕ್ಷಕ್ಕೆ ಮರಳಿದ್ದಾರೆ. ಶನಿವಾರವಷ್ಟೇ ತುಮಕೂರಿನಲ್ಲಿ ಪ್ರಚಾರ ಸಭೆಗೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಂಗಪ್ಪರ ನಿವಾಸಕ್ಕೆ ತೆರಳಿ, ಪಕ್ಷಕ್ಕೆ ಮರಳಲು ಆಹ್ವಾನ ನೀಡಿದ್ದರು.