ಗಂಗಾವತಿ ತಾಲೂಕಿನ ಗಡಿಭಾಗದ ಶಿವಪುರ ಬಳಿ ಭೋರೂಕಾ ಜಲವಿದ್ಯುತ್‌ಗಾರಕ್ಕಾಗಿ ನಡೆಯುತ್ತಿರುವ ಎಸ್ಕೇಪ್ ಕ್ರಸ್ಟ್ ಗೇಟ್ ಕಾಮಗಾರಿಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ಬಿಜೆಪಿ ಮುಖಂಡರು ಸೋಮವಾರ ವೀಕ್ಷಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಇತರರಿದ್ದರು. 
ಜಿಲ್ಲೆ

ಕಾಲುವೆಗಳಿಗೆ ನೀರು ಹರಿಸುವ ವೇಳೆ ಕಾಮಗಾರಿ ಸಲ್ಲ: ಮಾಜಿ ಶಾಸಕ ಪರಣ್ಣ ಮುನವಳ್ಳಿ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿನ ಕ್ಲೋಸರ್ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಯನ್ನು ನೀರು ಹರಿಸುವ ಸಂದರ್ಭದಲ್ಲಿ ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲೂಕಿನ ಗಡಿಭಾಗದ ಶಿವಪುರ ಬಳಿ ಭೋರೂಕಾ ಜಲವಿದ್ಯುತ್‌ಗಾರಕ್ಕಾಗಿ ನಡೆಯುತ್ತಿರುವ ಎಸ್ಕೇಪ್ ಕ್ರಸ್ಟ್ ಗೇಟ್ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು.

ಮುಂಗಾರು ವಿಳಂಬವಾಗಿದ್ದು, ಸದ್ಯಕ್ಕೆ ನೀರಿನ ಅಗತ್ಯವಿದೆ. ಜಲಾಶಯದಲ್ಲಿ 70 ಟಿಎಂಸಿ ನೀರು ಸಂಗ್ರಹವಾಗಿದೆ. ಮುಖ್ಯ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಸರ್ಕಾರ ವಿಳಂಭ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ನೀರಿನ ಅಗತ್ಯವಿರುವ ಸಂದರ್ಭದಲ್ಲಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಗಂಭೀರ ಪರಿಗಣಿಸಬೇಕಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ನೀರು ಹರಿಸಲು ನೀರಾವರಿ ಸಲಹಾ ಸಮಿತಿ ರಚನೆಯಾಗುವರೆಗೂ ಕಾಯುವುದು ಬೇಡ. ಸಿಎಂ ಮೂಲಕ ಅಧಿಕಾರಿಗಳಿಗೆ ಅಧಿಸೂಚನೆ ಹೊರಡಿಸಿ, ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನೀರಾವರಿ ನಿಗಮದ ಎಇಇ ಕೆ.ಸೂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಮುಖಂಡರಾದ ಎಚ್.ಸಿ.ಯಾದವ್, ಚಂದ್ರಶೇಖರ ಭತ್ತದ್, ಕೆ.ಶೇಷಾರಾವ್, ಯಮನೂರಪ್ಪ ಇತರರಿದ್ದರು.