ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಭೂ ಅಕ್ರಮ ನಡೆಯುತ್ತಿದೆ ಎನ್ನುವುದನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಇದು ಅವರ ಆಡಳಿತ ವೈಫಲ್ಯವನ್ನು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನರೇಂದ್ರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.
ಸೈಬರ್ ಸೆಂಟರ್‌ಗಳಲ್ಲಿ ನಖಲಿ ದಾಖಲೆ ಸೃಷ್ಠಿಸಿ ಭೂ ಭೂಕಳ್ಳತನ ಮಾಡಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಅವರ ಆಡಳಿತದ ವೈಖರಿ ಬಿಚ್ಚಿಟ್ಟಿದ್ದಾರೆ. ಅವರ ಸರ್ಕಾರವಿದ್ದರೂ ಮಳವಳ್ಳಿಯಲ್ಲಿ ಸರಿಯಾದ ಆಡಳಿತ ನಡೆಸುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಮಳವಳ್ಳಿಯಲ್ಲಿ ನಡೆಯುತ್ತಿರುವ ಭೂಗಳ್ಳತನದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸುವ ವೇಳೆ ಉಪವಿಭಾಗಾಧಿಕಾರಿ ಶಿವಮೂರ್ತಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 300 ಆರ್‌ಟಿಸಿ ರದ್ದು ಮಾಡಿಸಲಾಗಿದ್ದು, ಇದು ಜೆಡಿಎಸ್ ಶ್ರಮದ ಫಲವಾಗಿದೆ. ಇನ್ನು 800 ಆರ್‌ಟಿಸಿ ರದ್ದುಪಡಿಸಿ 1000 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿರುವ ಮಾಹಿತಿ ಸುಳ್ಳು. ಅಕ್ರಮ ಭೂಕಬಳಿಕೆ ಸಂಬಂಧ ಈವರೆಗೆ ನೋಟಿಸ್ ನೀಡಲಾಗಿಲ್ಲ ಎಂದರು.
2023ರ ನಂತರ ನರೇಂದ್ರಸ್ವಾಮಿ ಅಧಿಕಾರದ ಅವಧಿಯಲ್ಲಿಯೇ 300ಕ್ಕೂ ಹೆಚ್ಚು ಆರ್‌ಟಿಸಿ ಅಕ್ರಮವಾಗಿ ಇತರರಿಗೆ ಖಾತೆಯಾಗಿದೆ. ಅಧಿಕಾರಿಗಳಂತೆಯೇ ಶಾಸಕರೂ ಸರ್ಕಾರದ ಅಂಗ. ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿಕೊಂಡು, ಅಧಿಕಾರಿಗಳ ದುರ್ಬಳಕೆ ಮಾಡಿ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಭೂಗಳ್ಳರಿಂದ ತಮಗೆ ಪ್ರಾಣ ಬೆದರಿಕೆಯಿದೆ ಎಂದು ನರೇಂದ್ರಸ್ವಾಮಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಶಾಸಕರಿಗೆ ಸಂಬಂಧಿಸಿದ ಖಾಸಗಿ ಕಾರ್ಯಕ್ರಮಕ್ಕೆ ನಾಲ್ವರು ವೃತ್ತ ನಿರೀಕ್ಷಕರು ಸೇರಿದಂತೆ 100 ಜನ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಸರಿಯಲ್ಲ. ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಮಳವಳ್ಳಿ ತಾಲೂಕಿನ ಪೊಲೀಸ್ ಸಿಬ್ಬಂದಿಯನ್ನು ಹಿಡಿತದಲ್ಲಿರಿಸಿಕೊಳ್ಳುವತ್ತ ಗಮನಹರಿಸುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀಧರ್, ಜೆಡಿಎಸ್ ಎಸ್ಸಿ ಮತ್ತು ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಂ, ಸಿದ್ದಾಚಾರಿ, ಕಾಂತರಾಜು, ಶಂಕರ್ ಇದ್ದರು.