ಜಿಲ್ಲೆ

ಕೊಳವೆಬಾವಿ ಕೊರೆಸಲು ಬಿಡದ ಶಾಸಕ ಪಿ.ಎಂ.ನರೇಂದ್ರಸ್ವಾಮಿ: ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಾಗ್ದಾಳಿ

ಮಂಡ್ಯ: ಬಡ ರೈತರು ಕೃಷಿ ಚಟುವಟಿಕೆ ಅನುಕೂಲವಾಗಲು ರೂಪಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಿಯಾಗಿದೆ. ಅದರಲ್ಲಿಯೂ ಮಳವಳ್ಳಿ ತಾಲೂಕಿನಲ್ಲಿ ಕೊರೆಯಲು ಬಂದಿದ್ದ ವಾಹನವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜಮೀನಿನಿಂದಲೇ ವಾಪಸ್ ಕಳುಹಿಸಿದ್ದಾರೆಂದು ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

2018ರಲ್ಲಿ ಮಾತ್ರ ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಸಿಕೊಡಲಾಗಿದೆ. 2019ರಿಂದ 2023ರವರೆಗೆ ಒಂದು ಕೊಳವೆ ಬಾವಿ ಕೊರೆಸಲು ಸಾಧ್ಯವಾಗಲಿಲ್ಲ. ಕಾರಣ ಕೋವಿಡ್ ಹಾಗೂ ಸಿಐಡಿ ತನಿಖೆ ನಡೆಯುತ್ತಿತ್ತು. ಆದರೆ ಈಗ ತನಿಖೆ ಪೂರ್ಣಗೊಂಡಿದೆ. ಈಗಾಗಲೇ ಆಯ್ಕೆ ಮಾಡಿರುವಂತೆ ವಿವಿಧ ನಿಗಮದ ಮೂಲಕ 202 ಜನ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಬೇಕಿತ್ತು. ಆದರೆ ಶಾಸಕರು ಕೆಲಸ ಮಾಡದಂತೆ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಏನೆಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ, ಬೋವಿ, ಮಹರ್ಷಿ ವಾಲ್ಮೀಕಿ, ತಾಂಡಾ ನಿಗಮದಿಂದ 99 ಹಾಗೂ ಡಿ.ದೇವರಾಜ ಅರಸು, ಒಕ್ಕಲಿಗ, ವೀರಶೈವ, ನಿಜಶರಣ ಅಂಬಿಗರ ಚೌಡಯ್ಯ, ವಿಶ್ವಕರ್ಮ ಹಾಗೂ ಮರಾಠ ಸಮುದಾಯದ ಅಭಿವೃದ್ಧಿ ನಿಗಮದಿಂದ 103 ಕೊಳವೆಬಾವಿ ಕೊರೆಸಬೇಕಿತ್ತು. ಎಲ್ಲ ಫಲಾನುಭವಿ ರೈತರು ಬಡವರಾಗಿದ್ದಾರೆ. ಆದರೆ, ಶಾಸಕರು ನಾನು ಹೇಳಿದ ನಂತರ ಕೊಳವೆ ಬಾವಿ ಕೊರೆಯಿರಿ ಎನ್ನುತ್ತಿದ್ದಾರೆ. ಇದಕ್ಕೆ ಕಾರಣವೇನು?. ರೈತರಿಗೆ ಸೌಲಭ್ಯ ಸಿಗುವುದು ಅವರಿಗೆ ಬೇಕಿಲ್ಲವೇ?. ಕೂಡಲೇ ಆಯ್ಕೆಯಾಗಿರುವ ಫಲಾನುಭವಿ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಸಂಬಂಧಪಟ್ಟ ಸಚಿವರು ಕ್ರಮ ವಹಿಸುವಂತೆ ಒತ್ತಾಯಿಸಿದರು.

ಮಳವಳ್ಳಿ ತಾಲೂಕು ಅರ್ಧ ನೀರಾವರಿ ಹಾಗೂ ಅರ್ಧ ಬರಡು ಭೂಮಿಯಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೇವಲ 15 ದಿನ ನೀರು ಹರಿಸುವುದಾಗಿ ತಿಳಿಸಿದ್ದಾರೆ. ಆದರೆ ಈ ನೀರು ಕೊನೆ ಭಾಗಕ್ಕೆ ತಲುಪುತ್ತಿಲ್ಲ. ತಾಲೂಕಿನ ರೈತರು ಇನ್ನೂ ಒಟ್ಟಲು ಹಾಕಿಲ್ಲ. ಈಗಲೇ ಕಟ್ಟುಪದ್ದತಿಯಡಿ ನೀರು ಕೊಟ್ಟರೆ ಹೇಗೆ ವ್ಯವಸಾಯ ಮಾಡಲು ಸಾಧ್ಯ?. ತಮಿಳುನಾಡಿಗೆ ನೀರು ಬಿಡಲು ತೋರುವ ಆಸಕ್ತಿಯನ್ನು ನಮ್ಮ ರೈತರ ವಿಚಾರದಲ್ಲಿ ಏಕೆ ತೋರಿಸುತ್ತಿಲ್ಲ. ಆದ್ದರಿಂದ ನಮ್ಮ ರೈತರಿಗೆ ಅನ್ಯಾಯವಾಗದಂತೆ ಸಮರ್ಪಕವಾಗಿ ನೀರು ಹರಿಸಲೇಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ವೇಳೆ ಹಣವನ್ನು ಬಳಸಿಕೊಂಡರೆ ದೊಡ್ಡ ಆಂದೋಲನ ರೂಪಿಸಬೇಕಾಗುತ್ತದೆ. ಇನ್ನು ಮಳವಳ್ಳಿ ತಾಲೂಕಿನ ಪೂರಿಗಾಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹೊಸ ಕಟ್ಟಡಕ್ಕೆ ವರ್ಗಾಹಿಸಲಾಗುತ್ತಿದೆ. ಈ ಕಟ್ಟಡ ಸುಸಜ್ಜಿತವಾಗಿದ್ದರೂ, ಸ್ವಾರ್ಥ ಮತ್ತು ಯಾವುದೋ ದುರುದ್ದೇಶದಿಂದ ವರ್ಗಾಯಿಸಲಾಗುತ್ತಿದೆ. ಈ ಕಟ್ಟಡದಲ್ಲಿರುವ ರೇಷ್ಮೆ ಮತ್ತು ಕೃಷಿ ಇಲಾಖೆ ಕಚೇರಿಗಳನ್ನು ವರ್ಗಾಯಿಸಿ ಶಾಲೆಯನ್ನು ಅದೇ ಕಟ್ಟಡದಲ್ಲಿ ಮುಂದುವರಿಸಲಿ ಎಂದು ಆಗ್ರಹಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೆ.ಆರ್.ಪೇಟೆಯ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಒಂದು ಪಕ್ಷದ ಹಿರಿಯರು, ನಾಯಕರು, ಎರಡು ಬಾರಿ ರಾಜ್ಯವನ್ನು ಆಳಿದ್ದಾರೆ. ಅವರನ್ನು ಮೂದಲಿಸುವುದು ತಕ್ಕದ್ದಲ್ಲ. ಮುಂದೆ ಎಚ್ಚರಿಕೆಯಿಂದ ಮಾತನಾಡಿ. ನಮಗೂ ಜನ ಇದ್ದಾರೆ. ನಾವೂ ಸಹ ಹಿರಿತನವನ್ನು ನೋಡದೆ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಳವಳ್ಳಿ ಪುರಸಭೆ ಮಾಜಿ ಸದಸ್ಯ ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ಭದ್ರಚಲಮೂರ್ತಿ, ಮುಖಂಡರಾದ ಶಂಕರ್, ಸಾತನೂರು ಜಯರಾಂ ಇದ್ದರು.