ಹಿರೇಕೆರೂರ: ಸಮರ್ಪಕವಾಗಿ ಮಳೆ ಬಾರದೇ ರೈತರು ಬಿತ್ತಿದ ಬೆಳೆ ನಾಶವಾಗುತ್ತಿದ್ದು, ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಹಿರೇಕೆರೂರ-ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ತಾಲೂಕು ಎಂದು ಘೊಷಣೆ ಮಾಡಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಕೃಷಿ ಇಲಾಖೆ ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ರೈತರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಬಾರದ ಹಿನ್ನಲೆಯಲ್ಲಿ ಎರಡನೇ ಬಾರಿ ಹಾಗೂ ಕೆಲ ರೈತರು ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಎರಡನೇ ಬಾರಿಗೆ ಬಿತ್ತನೆ ಮಾಡಿದರೂ ಸರಿಯಾದ ವೇಳೆಗೆ ಮಳೆ ಬಾರದೇ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು. ಹಿರೇಕೆರೂರ, ರಟ್ಟಿಹಳ್ಳಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೊಷಣೆ ಮಾಡಿ ರೈತರಿಗೆ ಬಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಈ ವೇಳೆಗಾಗಲೇ ಬೆಳೆ ಹಾನಿ ಪರಿಹಾರ ನೀಡಲು ಸಿದ್ಧತೆ ಮಾಡಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಗಳ ಬಗ್ಗೆ ತಲೆ ಕೆಡಿಸಿಕೊಂಡಿದೆ ಹೊರತು, ರೈತರ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಅಲ್ಲದೆ, ರೈತರಿಗೆ ನೀಡಲಾಗುತ್ತಿದ್ದ ಕಿಸಾನ್ ಸಮ್ಮಾನ್ ನಿಧಿಯ 4000, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆಯ ಅಡಿಯಲ್ಲಿ ರೈತರ ಟ್ಯಾಕ್ಟರ್ ಡೀಸೆಲ್ ಸಬ್ಸಿಡಿಯನ್ನು ಸಹ ರದ್ದು ಪಡಿಸಿದೆ. ಸರ್ಕಾರ ರೈತರ ಅಭಿವೃದ್ಧಿ ಪರ ಚಿಂತನೆ ನಡೆಸದೇ ಕೇವಲ ಗ್ಯಾರಂಟಿಗಳ ಬಗ್ಗೆ ಹೆಚ್ಚು ಒತ್ತು ಕೊಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಪಟ್ಟಣದಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳು ಕಳೆದರೂ ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಶಾಸಕರು ಜನರ ಕಷ್ಟಕ್ಕೆ ಧಾವಿಸುತ್ತಿಲ್ಲ. ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಂಡಿದ್ದರೂ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನದಿಯಲ್ಲಿ ನೀರು ಇದ್ದರೂ ತಾಲೂಕಿನ ಕೆರೆಗಳನ್ನು ತುಂಬಿಸದೇ ಕಾಲಹರಣ ಮಾಡುತಿದ್ದಾರೆ ಎಂದು ಆರೋಪಿಸಿದರು.
ಪಪಂ ಸದಸ್ಯರಾದ ಹನುಮಂತಪ್ಪ ಕುರುಬರ, ದಿಲಶಾನ್ ಬಳಿಗಾರ, ಚಂದ್ರಕಲಾ ಕೋರಿಗೌಡ್ರ, ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಪಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಮುಖಂಡರಾದಸತೀಶ ಕೋರಿಗೌಡ್ರ, ಬಸನಗೌಡ ದೊಡ್ಡಗೌಡ್ರ ಇದ್ದರು.