ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜ.5ರಂದು ಮಳವಳ್ಳಿ ತಾಲೂಕಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಕಿರುಗಾವಲು ಸಂತೆಮಾಳ, ಪಟ್ಟಣ, ಕಸಬಾ(ಹಾಡ್ಲಿ) ವೃತ್ತ ಮತ್ತು ಹಲಗೂರು ಹೋಬಳಿ ಕೇಂದ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಎಚ್‌ಡಿಕೆ ಅವರು ಸಂಸತ್‌ಗೆ ಆಯ್ಕೆಯಾಗಿ ಐದಾರೂ ತಿಂಗಳು ಕಳೆದಿದೆ. ಅವರು ಎರಡು ಮುಖ್ಯ ಖಾತೆ ನಿರ್ವಹಣೆ ಮಾಡುತ್ತಿರುವುದರಿಂದ ಕೃತಜ್ಞತೆ ಸಲ್ಲಿಸಲು ತಡವಾಗಿದೆ. ಅದಕ್ಕೆ ಸಚಿವರ ಪರವಾಗಿ ಕ್ಷಮೆ ಕೋರುತ್ತೇನೆ. ಅಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಕಿರುಗಾವಲು ಗ್ರಾಮದ ಐಶ್ವರ್ಯಾಗೌಡ ಅವರನ್ನು ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬೇಕು. ಆಕೆಯ ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ಸಿಗರು ಮಾತ್ರ ಭಾಗವಹಿಸಿರುವವ ಭಾವಚಿತ್ರಗಳಿವೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆಂಬ ಕಾರಣಕ್ಕೆ ಪ್ರಕರಣದ ತನಿಖೆ ಹಾದಿ ತಪ್ಪುವ ಆತಂಕವಿದೆ. ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದೇ ಕಿರುಗಾವಲು ಗ್ರಾಮದಿಂದಲೇ ತನಿಖೆ ಆರಂಭಿಸಬೇಕು. ಜಿಲ್ಲೆಯಲ್ಲಿಯೂ ಐಶ್ವರ್ಯಗೌಡ ಅವರಿಂದ ವಂಚಿತರಾಗಿರುವ 4 ಪ್ರಕರಣಗಳಿವೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ 2-3 ದೂರು ದಾಖಲಾಗಿದೆ. ಅವರ ಹಣಕಾಸು ಹಾಗೂ ಚಿನ್ನದ ವ್ಯವಹಾರದಲ್ಲಿ ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದರಿಂದಾಗಿ ಆಕೆ ರಾಜ್ಯಮಟ್ಟದಲ್ಲಿ ಅನ್ಯಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ದೂರಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಸಿದ್ದಾಂತ ಬೇಕಾಗಿದೆ. ಈ ಮೂಲಕ ಅಧಿಕಾರ ಗಿಟ್ಟಿಸಿಕೊಳ್ಳಲು ಅಂಬೇಡ್ಕರ್ ಅವರ ಸಿದ್ದಾಂತಕ್ಕೆ ಅಪಮಾನ ಮಾಡಿದ್ದಾರೆ. ಶಾಸಕರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇನ್ನು ಈ ಸಂಬಂಧ ಕ್ಷೇತ್ರದಲ್ಲಿ ಅವರನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆಯ ಮಾತುಗಳನ್ನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೆಗಾರಿಕೆ ಸಂಸ್ಕೃತಿ ಇಲ್ಲ ಎಂದರು.
ಮಳವಳ್ಳಿ ಜೆಡಿಎಸ್ ಕಾರ್ಯಾಧ್ಯಕ್ಷ ಚಿಕ್ಕಮಲಗೂಡು ಪುಟ್ಟಬುದ್ದಿ, ಯುವ ಜನತಾದಳ ಅಧ್ಯಕ್ಷ ಶ್ರೀಧರ್, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯರಾಂ, ಜಿ.ಪಂ ಮಾಜಿ ಸದಸ್ಯ ಹನುಮಂತು, ಕಾಂತರಾಜು, ಸಿದ್ದಾಚಾರಿ, ಕಿರುಗಾವಲು ಪ್ರಕಾಶ್, ನಾಗರಾಜು, ವೇಣುಗೋಪಾಲ್ ಇದ್ದರು.